ರಾಯಚೂರು: ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ನೂತನವಾಗಿ ವೆಂಕಟ್ ರಾಜ್ ಎಂಬುವವರನ್ನು ಜಿಲ್ಲಾಧಿಕಾರಿಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಅವರು ಇನ್ನು ಅಧಿಕಾರ ವಹಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಯಾರು ಎನ್ನುವ ಗೊಂದಲ ಜನರಲ್ಲಿ ಮೂಡಿದೆ.
ಸರ್ಕಾರ ಫೆ.13 ಅನೇಕ ಐಎಎಸ್ ಅಧಿಕಾರಗಳನ್ನು ವರ್ಗಾವಣೆ ಮಾಡಿ ಆದೇಶಿತ್ತು. ಅದರಲ್ಲಿ ರಾಯಚೂರು ಹಾಲಿಯಿದ್ದ ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಕೂಡ ವರ್ಗಾವಣೆಗೊಂಡಿದ್ದರು. ಅವರನ್ನು ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಜಂಟಿ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿತ್ತು. ಅವರ ಜಾಗಕ್ಕೆ ವೆಂಕಟ್ ರಾಜ್ ಎನ್ನುವವರನ್ನು ಜಿಲ್ಲಾಧಿಕಾರಿಯನ್ನಾಗಿ ನೇಮಿಸಿತ್ತು. ಆದರೆ, ಇದುವರೆಗೆ ಜಿಲ್ಲಾಧಿಕಾರಿಗಳು ಅಧಿಕಾರ ಸ್ವೀಕರಿಸಿಲ್ಲ. ಇದರಿಂದಾಗಿ ಜಿಲ್ಲಾಧಿಕಾರಿಗಳ ಅನುಪ ಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರಾಜ್ಯ ಸರ್ಕಾರ ಪ್ರತಿ ತಿಂಗಳ ಮೂರನೇ ವಾರದಂದು ಪ್ರತಿ ಜಿಲ್ಲಾಧಿಕಾರಿಗಳಿಗೆ ಜಿಲ್ಲಾಧಿಕಾರಿ ನಡೆ ಗ್ರಾಮದ ಕಡೆ ಎಂಬ ವಿಶೇಷ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಈ ವಿಶೇಷ ಕಾರ್ಯಕ್ರಮ ಜಿಲ್ಲಾಧಿಕಾರಿಗಳಿಲ್ಲದೇ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿದೆ. ಹಿಂದುಳಿದ ಆರು ಜಿಲ್ಲೆಗಳ ಪೈಕಿ ರಾಯಚೂರು ಜಿಲ್ಲೆಯ ಒಂದಾಗಿದ್ದು, ಉನ್ನತ ಹುದ್ದೆಗಳನ್ನ ಕೂಡಲೇ ಭರ್ತಿ ಮಾಡಲಾಗಿದೆ. ಆದರೆ, ಜಿಲ್ಲಾಧಿಕಾರಿಗಳು ಇಲ್ಲದೇ ಇರುವುದರಿಂದ ಜನರಲ್ಲಿ ಗೊಂದಲ ಮೂಡಿದೆ.
ಕಳ್ಳಿ ಲಿಂಗಸುಗೂರಲ್ಲಿ ಅಪರ ಡಿಸಿಗೆ ಅದ್ಧೂರಿ ಸ್ವಾಗತ:
ಇಂದು ಅಪರ ಜಿಲ್ಲಾಧಿಕಾರಿ ಕೆ.ಆರ್. ದುರುಗೇಶ್ ಅವರು ಜಿಲ್ಲಾಧಿಕಾರಿ ನಡೆ ಗ್ರಾಮದ ಕಡೆ ಕಾರ್ಯಕ್ರಮದಡಿಯಲ್ಲಿ ಕಳ್ಳಿ ಲಿಂಗಸುಗೂರ ಗ್ರಾಮಕ್ಕೆ ಭೇಟಿ ನೀಡಿದರು. ಈ ವೇಳೆ ಗ್ರಾಮಸ್ಥರು ಹೂ ಎರಚಿ, ಕಳಸ ಬೆಳಗುವ ಮೂಲಕ ಅದ್ಧೂರಿಯಾಗಿ ಸ್ವಾಗತ ಕೋರಿದರು. ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಈ ವೇಳೆ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.