ರಾಯಚೂರು: ರಿಮ್ಸ್ ಹಾಗೂ ಒಪೆಕ್ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆ, ಆಸ್ಪತ್ರೆ ನಿರ್ವಹಣೆ, ಸೂಕ್ತ ಭದ್ರತೆ ಒದಗಿಸುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಂಡು, ಕೋವಿಡ್ ವಾರ್ಡ್, ಆಸ್ಪತ್ರೆ ಸುಧಾರಣೆ ಮಾಡುವಂತೆ ರಿಮ್ಸ್ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಒಪೆಕ್ ಹಾಗೂ ರಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ, ಸ್ವಚ್ಚತೆ ನಿರ್ಲಕ್ಷ್ಯದ ವಿಚಾರವಾಗಿ ದೂರುಗಳು ಬಂದಿತ್ತು. ಈ ಹಿನ್ನೆಲೆಯಲ್ಲಿ ರಿಮ್ಸ್‌ನ ಆಡಳಿತ ಕಚೇರಿಯಲ್ಲಿ ಭದ್ರತಾ ಅಧಿಕಾರಿಗಳು, ಶುಶ್ರೂಷಕರು, ವೈದ್ಯರು, ಸ್ವಚ್ಚತೆ ಸಿಬ್ಬಂದಿ ಸೇರಿ ಐದು ವಿಭಾಗದವರೊಂದಿಗೆ ಸುದೀರ್ಘವಾಗಿ ಸಭೆ ನಡೆಸಲಾಗಿದೆ ಎಂದರು.
ಸಭೆಯಲ್ಲಿ ಕೋವಿಡ್ ಆಸ್ಪತ್ರೆಗೆ ಸೂಕ್ತ ಭದ್ರತೆ ವ್ಯವಸ್ಥೆ ಕೈಗೊಳ್ಳುವುದು, ವೈದ್ಯರು ರೋಗಿಗಳಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡುವುದು, ರೋಗಿಗಳನ್ನು ಸುರಕ್ಷತೆಯಿಂದ ನೋಡಿಕೊಳ್ಳುವುದು, ಶುಶ್ರೂಷಕರ ಕೆಲಸದ ಕಾರ್ಯವೈಖರಿ ಚರ್ಚಿಸಿ ಸೂಕ್ತವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುವುದು, ಆಸ್ಪತ್ರೆ ವಾರ್ಡ್‌ಗಳ ಸ್ವಚ್ಚತಾ ವ್ಯವಸ್ಥೆಯನ್ನ ಕೈಗೊಳ್ಳುವುದು ಮತ್ತು ವೈದ್ಯರು ಪಾಳಿ ಪ್ರಕಾರ ಕೋವಿಡ್ ಕಾರ್ಯ ನಿರ್ವಹಿಸುವಂತೆ ಕ್ರಮ ಕೈಗೊಂಡು, ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಿ, ಗುಣಮುಖರಾಗುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಕೃಷ್ಣಾ ನದಿಯಿಂದ ಪ್ರವಾಹ ಎದುರಿಸುತ್ತಿರುವ ರಾಯಚೂರು ಜಿಲ್ಲೆಗೆ ಇದೀಗ ತುಂಗಭದ್ರಾ ನದಿಯ ಪ್ರವಾಹ ಭೀತಿ ಶುರುವಾಗಿದೆ. ತುಂಗಭದ್ರಾ ಜಲಾಶಯ ವ್ಯಾಪ್ತಿಯ ಜಲಾನಯನ ಪ್ರದೇಶದಲ್ಲಿ ಮಳೆಯಿಂದಾಗಿ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಹೆಚ್ಚುವರಿ ನೀರನ್ನು ಜಲಾಶಯಕ್ಕೆ ಬಿಡಲಾಗುತ್ತಿದೆ. ಇಂದು ತುಂಗಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ 49 ಸಾವಿರ ಕ್ಯುಸೆಕ್ ನೀರು ಬಿಡಲಾಗಿದೆ. ಒಂದು ವೇಳೆ ಜಲಾಶಯಕ್ಕೆ ಒಳಹರಿವು ಹೆಚ್ಚಳಗೊಂಡರೆ ಜಲಾಶಯದಿಂದ ನೀರು ನದಿಗೆ ಹರಿಸಲಾಗುತ್ತದೆ.
ಇಲ್ಲಿಯವರೆಗೆ ಯಾವುದೇ ಪ್ರವಾಹ ಭೀತಿ ಇರದಿದ್ದರೂ, ಜಿಲ್ಲಾಡಳಿತ ಪ್ರವಾಹಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ತುಂಗಭದ್ರಾ ನದಿಯ ತೀರದಲ್ಲಿ ಸಿಂಧನೂರು, ಮಾನವಿ, ರಾಯಚೂರು ತಾಲೂಕಿನ ಒಟ್ಟು 33 ಗ್ರಾಮಗಳಿವೆ. ಈ ಭಾಗದಲ್ಲಿ 28,970 ಕುಟುಂಬಗಳ 1,42,932 ಜನರು ವಾಸಿಸುತ್ತಾರೆ. ನದಿ ತೀರದಲ್ಲಿರುವ ಗ್ರಾಮಸ್ಥರಿಗೆ ನದಿ ತೀರಕ್ಕೆ ತೆರಳದಂತೆ, ಜಾನುವಾರುಗಳನ್ನು ಬಿಡದಂತೆ ಎಚ್ಚರಿಕೆ ನೀಡಲಾಗಿದೆ. ಪ್ರವಾಹ ಎದುರಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಸಹ ರಚನೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.