ರಾಯಚೂರು: ರಾಜ್ಯದ ಚಲನಚಿತ್ರ ಮಂದಿರಗಳಲ್ಲಿ ನಟ ದಿ. ಪುನೀತ್ ರಾಜ್ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸುತ್ತಿರುವುದು ಕನ್ನಡಿಗರಿಗೆ ಮಾಡುತ್ತಿರುವ ಅವಮಾನವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ತಿಳಿಸಿದ್ದಾರೆ. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಜೇಮ್ಸ್ ಚಲನಚಿತ್ರವನ್ನು ತೆಗೆಯುತ್ತಿರುವ ಬಗ್ಗೆ ನನಗೂ ದೂರವಾಣಿ ಕರೆ ಮಾಡಿ ಹೇಳುತ್ತಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.
ಬಿಜೆಪಿ ಸರ್ಕಾರ ಡೀಸೆಲ್, ಪೆಟ್ರೋಲ್, ಗ್ಯಾಸ್ ಸಿಲಿಂಡರ್, ಸಿಮೆಂಟ್, ಕಬ್ಬಿಣ ಸೇರಿದಂತೆ ವಿವಿಧ ಬೆಲೆಯನ್ನು ಏರಿಕೆ ಮಾಡಿ ಜನರ ಮೇಲೆ ಬರೆ ಹಾಕುತ್ತಾ, ಜನರ ಜೇಬಿನಿಂದ ಹಣವನ್ನು ಪಿಕ್ ಪಾಕೆಟ್ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು. ಇಂತಹ ನೀಚ ಸರ್ಕಾರವನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿರಲಿಲ್ಲ ಎಂದು ಡಿಕೆಶಿ ಹರಿಹಾಯ್ದರು.
ಸರ್ಕಾರದ ಯೋಜನೆಗಳಲ್ಲಿ ಗುತ್ತಿಗೆದಾರರಿಂದ ಶೇ. 30ರಿಂದ 40 ರಷ್ಟು ಕಮಿಷನ್ ಪಡೆಯುತ್ತಿದ್ದಾರೆ. ಈ ಬಗ್ಗೆ ಗುತ್ತಿಗೆದಾರರು ನನ್ನ ಬಳಿ ತಮ್ಮ ಅಳಲು ತೋಡಿಕೊಳ್ಳುತ್ತಿದ್ದು, ಗಂಗಾ ಕಲ್ಯಾಣ ಯೋಜನೆ ಬೋರ್ವೆಲ್ ಸೇರಿದಂತೆ ವಿವಿಧ ಫಲಾನುಭವಿಗಳಿಗೆ ನೀಡುವ ಯೋಜನೆಯಲ್ಲಿ ಪರ್ಸಂಟೇಜ್ ಪಡೆಯುವ ಮೂಲಕ ಭ್ರಷ್ಟಾಚಾರದಿಂದ ಸರ್ಕಾರ ಮುಳುಗಿದೆ ಎಂದು ಆರೋಪಿಸಿದರು.
ಕಪ್ಪು ಚುಕ್ಕೆಯಾಗಿದೆ.. ಸಚಿವ ವಿ. ಸೋಮಣ್ಣ ಮೇಲೆ ಅಕ್ರಮ ಆಸ್ತಿಗಳಿಕೆ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಚಿವ ಕೆ.ಎಸ್ ಈಶ್ವರಪ್ಪ, ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ, ಅಷ್ಟೇ ಅಲ್ಲದೆ ನನ್ನ ಮೇಲೂ ಕೇಸ್ ಇದೆ. ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಮುಸ್ಲಿಂ ಸಮುದಾಯದ ವರ್ತಕರಿಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡದೆ ಇರುವುದು ದೊಡ್ಡ ತಪ್ಪಾಗಿದ್ದು, ಬಿಜೆಪಿಯ ಈ ಧೋರಣೆ ಮಾರಕದ ಜತೆಗೆ ಕಪ್ಪು ಚುಕ್ಕೆಯಾಗಿದೆ ಎಂದು ಡಿ ಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ದೇಶದಲ್ಲೇ ಮೊದಲ ಬಾರಿಗೆ ಡಿಜಿಟಲ್ ಸದಸ್ಯತ್ವದ ಅಭಿಯಾನ ನಡೆಸಲಾಗುತ್ತಿದೆ. ರಾಜ್ಯದಲ್ಲಿ 50 ಲಕ್ಷ ಸದಸ್ಯರನ್ನು ನೋಂದಾಯಿಸು ಗುರಿ ಹೊಂದಲಾಗಿದೆ. ಈಗಾಗಲೇ ಇಲ್ಲಿಯವರೆಗೆ 28 ಲಕ್ಷ ಸದಸ್ಯರಿಗೆ ಸದ್ಯಸ್ಯತ್ವ ನೀಡಲಾಗಿದೆ. 31ರವರೆಗೆ ಸದಸ್ಯತ್ವ ಅಭಿಯಾನ ನಡೆಯಲಿದ್ದು, ಅಷ್ಟರೊಳಗೆ ನಿಗದಿತ ಗುರಿಯನ್ನು ತಲುಪುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಓದಿ: ಎಂದೂ ಸೆಗಣಿನೇ ಎತ್ತದವರು ಗೋಮಾತೆ ಬಗ್ಗೆ ಪಾಠ ಮಾಡುತ್ತಾರೆ: ಸಿದ್ದರಾಮಯ್ಯ