ರಾಯಚೂರು: ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮುಂಗಾರು ಬೆಳೆಗಳಾದ ತೊಗರಿ, ಸಜ್ಜೆ, ಹತ್ತಿ ಬೆಳೆಗಳು ಸಂಪೂರ್ಣ ಜಲಾವೃತವಾಗಿದ್ದು, ರೈತರು ಸರ್ಕಾರದಿಂದ ಪರಿಹಾರ ನಿರೀಕ್ಷೆಯಲ್ಲಿದ್ದಾರೆ.
ಚಂದ್ರಬಂಡಾ, ಗಿಲ್ಲೇಸೂಗುರು, ಕಲ್ಮಲಾ, ದೇವಸಗೂರು ಹೋಬಳಿಗಳಲ್ಲಿ ತೊಗರಿ, ಸಜ್ಜೆ, ಹತ್ತಿ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಕೃಷಿ ಇಲಾಖೆಯ ಪ್ರಕಾರ ರಾಯಚೂರು ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆ 419 ಮೀ.ಮೀ ಮಳೆಯಾಗಬೇಕಾಗಿತ್ತು. ಆದರೆ, ಈ ಬಾರಿ 609 ಮೀ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.45ರಷ್ಟು ಹೆಚ್ಚುವರಿ ಮಳೆಯಾಗಿದೆ. ಹೀಗಾಗಿ 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಂದಾಜು ಶೇ.8ರಷ್ಟು ಹಾನಿ ಸಂಭವಿಸಿದ್ದು, ಮಳೆಹಾನಿ ಕುರಿತ ಕೃಷಿ ಇಲಾಖೆ ಸರ್ವೇ ಕಾರ್ಯ ಪ್ರಗತಿಯಲ್ಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರೈತ ಮಲ್ಲಿಕಾರ್ಜುನ, ಕಳೆದೆರಡು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ತೊಗರಿ ಬೆಳೆ ಸಂಪೂರ್ಣವಾಗಿ ಹಾಳಾಗಿದೆ. ಒಂದು ಎಕರೆಗೆ ಸಮಾರು 5 ಸಾವಿರ ಖರ್ಚು ತಗುಲಿದೆ. ಐದು ಎಕರೆ ಪ್ರದೇಶದ ಪೈಕಿ ತಗ್ಗು ಪ್ರದೇಶದಲ್ಲಿರುವ ನಾಲ್ಕು ಎಕರೆ ಬೆಳೆ ಮಳೆಗೆ ಕೊಚ್ಚಿಹೋಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಸರ್ಕಾರ ಈ ಕುರಿತು ತುರ್ತು ಕ್ರಮವಹಿಸಿ ಪರಿಹಾರ ನೀಡಲು ಮುಂದಾಗಬೇಕಿದೆ ಎಂದು ಒತ್ತಾಯಿಸಿದ್ದಾರೆ.