ರಾಯಚೂರು: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ದಂಪತಿ 6 ಜನರಿಗೆ ಲಕ್ಷಾಂತರ ರೂ. ಪಡೆದುಕೊಂಡು ವಂಚಿಸಿರುವ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಬೀದರ್ ಮೂಲದ ಸಂಜಯ್ ಶಂಭು ಕೊಲ್ಹಾರ್ ಹಾಗೂ ಪ್ರೇರಣಾ ವಂಚಿಸಿದ್ದಾರೆ ಎನ್ನಲಾದ ದಂಪತಿ.
ನವೀನ್, ಶರಣ ಬಸವ, ಅಮರೇಶ, ಸಣ್ಣ ಹನುಮಂತ, ಚಾಂದ್ ಹುಸೇನ್ ಹಾಗೂ ಮಹೆಬೂಬ್ ಸಾಬ್ ವಂಚನೆಗೊಳದವರು. ಈ 6 ಜನರು 38 ಲಕ್ಷದ 76 ಸಾವಿರ ರೂ. ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಸಂಜಯ್ ಶಂಭು ಹಾಗೂ ಆತನ ಪತ್ನಿ ಪ್ರೇರಣಾ ಲಿಂಗಸೂಗೂರಿನಲ್ಲಿ 2019ರಲ್ಲಿ ಲೋಕಾಯುಕ್ತ ಇಲಾಖೆಯ ಅಧಿಕಾರಿಯಾಗಿದ್ದು, ಈಗ ನಿವೃತ್ತಿ ಹೊಂದಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೇ ನನಗೆ ಗಣ್ಯ ರಾಜಕೀಯ ವ್ಯಕ್ತಿಗಳು ಪರಿಚಯವಿದ್ದು, ಅರ್ಹ ಹಾಗೂ ಸೂಕ್ತ ಅಭ್ಯರ್ಥಿಗಳು ನೌಕರಿ ಕೊಡಿಸುವುದಾಗಿ ಹೇಳಿದ್ದಾರೆ.
ಇದನ್ನು ನಂಬಿದ ಈ 6 ಜನ ಸ್ನೇಹಿತರು ನೌಕರಿ ಸಿಗುತ್ತದೆ ಎಂಬ ವಿಶ್ವಾಸದೊಂದಿಗೆ ಹಣ ನೀಡಲು ಸಿದ್ಧವಾಗಿ, ನವೀನ್ 11 ಲಕ್ಷ 18 ಸಾವಿರ ರೂ., ಶರಣ ಬಸವ, ಅಮರೇಶ 7 ಲಕ್ಷ ರೂ. ಸಣ್ಣ ಹನುಮಂತ 5 ಲಕ್ಷ 18 ಸಾವಿರ ರೂ., ಚಾಂದ್ ಹುಸೇನ್ 4 ಲಕ್ಷ 50 ಸಾವಿರ ರೂ., ಮಹೆಬೂಬ್ ಸಾಬ್ 3 ಲಕ್ಷ ರೂಪಾಯಿ ಸೇರಿಕೊಂಡು 37 ಲಕ್ಷ 86 ಸಾವಿರ ರೂಪಾಯಿ ಹಣವನ್ನು ಸಂಜಯ್ ಬ್ಯಾಂಕ್ ಗೆ ಹಾಕಿದ್ದಾರೆ. ಇದಾದ ಬಳಿಕ 2019 ನ.7ರಂದು 50 ಸಾವಿರ ಹಾಗೂ 2019 ನವೆಂಬರ್ 13ರಂದು 22 ಸಾವಿರ ರೂ, 2019 ಡಿ.19ರಂದು 18 ಸಾವಿರ ರೂ ಸೇರಿ ಒಟ್ಟು 90 ಸಾವಿರ ರೂ.ಯನ್ನು ಫೋನ್ ಪೇ ಮೂಲಕ ವರ್ಗಾವಣೆ ಮಾಡಿ ಒಟ್ಟು 38 ಲಕ್ಷ 76 ಸಾವಿರ ರೂ.ಯನ್ನು ಕೆಲಸವನ್ನು ಕೊಡಿಸುತ್ತಾರೆ ಎಂದು ನಂಬಿ ನೀಡಿದ್ದಾರೆ.
ಆರೋಪಿಗಳ ವಿರುದ್ಧ ದೂರು.. ಆದರೆ ಆರೋಪಿ ನೌಕರಿ ಕೊಡಿಸದೆ ಇತ್ತ ಹಣವನ್ನು ವಾಪಸ್ ಸಂದಾಯ ಮಾಡದೆ ಸ್ವಂತಕ್ಕೆ ಬಳಸಿಕೊಂಡಿದ್ದಾನೆ ಎಂದು ಹಣ ನೀಡಿದವರು ಆರೋಪಿಸಿದ್ದಾರೆ. ಸರಳಾಕ್ಷ ಹೆಸರೂರು ಎಂಬುವವರು ಲಿಂಗಸೂಗೂರು ಠಾಣೆಗೆ ಸಂಜಯ್ ಶಂಭು ಹಾಗೂ ಆತನ ಪತ್ನಿ ಪ್ರೇರಣಾ ವಿರುದ್ದ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ದ ಕಲಂ 406, 420 ಐಪಿಸಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನೌಕರಿ ಕೊಡಿಸುವುದಾಗಿ ಭರವಸೆ.. ಬೀದರ್ ಜಿಲ್ಲೆಯ ಸಂಜಯ್ ಶಂಭು, ಪ್ರೇರಣಾ ಇಬ್ಬರು ನಮ್ಮ ದೂರು ಸಂಬಂಧಿಕರು ಎಂದು ನಮ್ಮಲ್ಲಿ ಪರಿಚಯವಾದರು. ಹಾಗೇ ನನ್ನ ಪತ್ನಿ ಕಡೆಯಿಂದ ಪ್ರೇರಣ ಸಂಬಂಧಿಯಾಗಿದ್ದರು. ಇದಾದ ಬಳಿಕ ಸಂಜಯ್ ದೂರವಾಣಿ ಮೂಲಕ ಪರಿಚಯವಾಗಿ ಫೋನ್ನಲ್ಲಿ ಮಾತನಾಡುತ್ತಿದ್ದೇವೆ. ಒಂದು ದಿನ ನಾನು ಲೋಕಾಯುಕ್ತ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೆ. ಸ್ವಯಂ ನಿವೃತ್ತಿಯನ್ನು ಪಡೆದುಕೊಂಡಿದ್ದೇನೆ. ರಾಜಕೀಯ ಗಣ್ಯರ ಪರಿಚಯವಿದೆ. 15 ದಿನದೊಳಗಾಗಿ ನಿಮ್ಮವರಿಗೆ ಯಾರಾದರೂ ಪರಿಚಯವಿರುವ ಅರ್ಹತೆ ಹೊಂದಿರುವವರಿಗೆ ನೌಕರಿ ಕೊಡಿಸುವುದಾಗಿ ಹೇಳಿದರು. ಅನುಮಾನಗೊಂಡ ನಾನು ಆಗುವುದಿಲ್ಲ ಎಂದು ಹೇಳಿ ಸುಮ್ಮನಾದೆ. ಇದಾದ ಬಳಿಕ ಬೀದರ್ಗೆ ಹೋಗಿದೆ. ಅಲ್ಲಿ ಅವರನ್ನು ನೋಡಿದೆ. ಜತೆಗೆ ಪ್ರೇರಣಾ ಅವರ ಬ್ಯೂಟಿ ಪಾರ್ಲರ್ ಇತ್ತು. ನಿತ್ಯ ವ್ಯಾಪಾರ ಚೆನ್ನಾಗಿದೆಯಾ ಎಂಬುದನ್ನು ನೋಡಿ ಕೆಲಸ ಮಾಡಿಸಿ ಕೊಡಬಹುದೆಂದು ನಂಬಿದೆ.
ಇದಾದ ನಂತರ ವಿಚಾರ ತಿಳಿದ ನಮಗೆ ಪರಿಚಯ ಇರುವ ಈ 6 ಜನ ಹಣ ನೀಡಿದರು. ಇದನ್ನು ಅವರಿಗೆ ಬ್ಯಾಂಕ್ ಮೂಲಕ ಹಾಕಿದ್ದಾರೆ. ಹಣ ನೀಡಿದ ಬಳಿಕ ಕೆಲಸ ಯಾವಾಗ ಆಗುತ್ತದೆ ಎಂದು ಹಲವು ಬಾರಿ ಕೇಳಿದರೆ, ದಿನಗಳು ಮುಂದೆ ಹಾಕುತ್ತ ಹೋದರು. ಅಲ್ಲದೇ ಖುದ್ದಾಗಿ ಬೀದರ್ಗೆ ಹೋಗಿ ಕೇಳಿದಾಗ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೆ ಕೆಲಸ ಕೊಡಿಸಿಲ್ಲ. ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ದೂರು ನೀಡಿರುವುದಾಗಿ ಆರೋಪಿಗಳಾದ ದಂಪತಿಯ ಸಂಬಂಧಿಕರಾದ ಸರಳಾಕ್ಷ ಅವರು 'ಈಟಿವಿ ಭಾರತ' ಪ್ರತಿನಿಧಿಗೆ ದೂರವಾಣಿ ಕರೆಯಲ್ಲಿ ತಿಳಿಸಿದ್ದಾರೆ. ಸರಳಾಕ್ಷ ಅವರು ಮೋಸ ಹೋದವರಿಗೂ ಸ್ನೇಹಿತರಾಗಿದ್ದು, ಕೆಲಸ ಕೊಡಿಸುತ್ತೇವೆ ಎಂಬ ವಿಚಾರದಲ್ಲಿ ಮಧ್ಯೆಸ್ಥಿಕೆ ವಹಿಸಿದ್ದರಂತೆ.
ಇದನ್ನೂ ಓದಿ: ಸರ್ಕಾರಿ ಕೆಲಸದ ಆಮಿಷ, ಒಂದೇ ಊರಿನ 8 ವಿದ್ಯಾರ್ಥಿಗಳಿಗೆ 1.5 ಕೋಟಿ ರೂ. ವಂಚನೆ