ಲಿಂಗಸುಗೂರು (ರಾಯಚೂರು): ಆರೋಗ್ಯ ಇಲಾಖೆಯಲ್ಲಿ ಕೊರೊನಾ ಪರೀಕ್ಷೆ ಮತ್ತು ಔಷಧಿ ವಿತರಣೆಯಲ್ಲಿ ಭಾರಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ.
ನಗರದ ಸಾರ್ವಜನಿಕರ ಆಸ್ಪತ್ರೆ ಆವರಣದಲ್ಲಿರುವ ಐಸೋಲೇಷನ್ ವಾರ್ಡ್ನಲ್ಲಿ ನಡೆಯುವ ಕೋವಿಡ್ ತಪಾಸಣಾ ಕೇಂದ್ರ ಭ್ರಷ್ಟಾಚಾರದ ಕೇಂದ್ರವಾಗಿ ಹೊರಹೊಮ್ಮಿದೆ. ಸರ್ಕಾರದ ನಿಯಮ ಉಲ್ಲಂಘಿಸಿ ಸ್ವ್ಯಾಬ್ ಟೆಸ್ಟ್ ವರದಿ ನೀಡಲು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆಂದು ರೋಗಿಗಳು ದೂರಿದ್ದಾರೆ. ಹೋಂ ಕ್ವಾರಂಟೈನ್ನಲ್ಲಿರುವವರು ಔಷಧಿ ಕೇಳಿದ್ರೆ ಸಾವಿರ ರೂಪಾಯಿ ಲಂಚ ಕೊಡಬೇಕು. ಆರೋಗ್ಯ ಇಲಾಖಾ ಸಿಬ್ಬಂದಿ ಸೋಂಕಿನ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎನ್ನಲಾಗ್ತಿದೆ.
ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಅಮರೇಶ ಮಾಕಾಪುರ ಅವರನ್ನ ಕೇಳಿದ್ರೆ, ಆರೋಪಗಳನ್ನ ತಳ್ಳಿ ಹಾಕಿದ್ರು. ಒಂದು ವೇಳೆ ಅವ್ಯವಹಾರ ನಡೆದಿದ್ರೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ರು.
ಭ್ರಷ್ಟಾಚಾರ ಕುರಿತು ಕೊರೊನಾ ಪೀಡಿತ ಉಪನ್ಯಾಸಕರೊಬ್ಬರು, ವಿಡಿಯೋ ಬಿಡುಗಡೆ ಮಾಡಿ, ಕೋವಿಡ್ ಟೆಸ್ಟ್ ಹಾಗೂ ಔಷಧಿ ನೀಡುವ ಹೆಸರಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಇದು ತಾಲೂಕು ಆಡಳಿತದ ಗಮನಕ್ಕೆ ತಂದರೂ ತಾತ್ಸಾರ ಮನೋಭಾವದಿಂದ ಪರೋಕ್ಷ ಬೆಂಬಲ ನೀಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.