ರಾಯಚೂರು: ಕೊರೊನಾ ದೃಢಪಟ್ಟ ಸೋಂಕಿತನೋರ್ವ ಆರೈಕೆ ಕೇಂದ್ರಕ್ಕೆ ದಾಖಲಾಗದೆ, ಆರೋಗ್ಯ ಅಧಿಕಾರಿಗಳ ಕೈಗೂ ಸಿಗದೆ ಓಡಾಡುತ್ತಿದ್ದ. ಈ ಹಿನ್ನೆಲೆ ದೇವದುರ್ಗ ತಾಲೂಕಿನ ವಿರಗೋಟ ಗ್ರಾಮದ ವ್ಯಾಪ್ತಿಯ ಕುರುಬರದೊಡ್ಡಿ ಗ್ರಾಮದಲ್ಲಿ ವಾಸಿಸುತ್ತಿದ್ದ ದೇವಪ್ಪ ಅವರ ಪಡಿತರ ಚೀಟಿ ಮತ್ತು ಗುಡಿಸಲಿನ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ರಾಯಚೂರು ಉಪವಿಭಾಗಾಧಿಕಾರಿ ಆದೇಶಿಸಿದ್ದಾರೆ.
ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಮುಂಜಾಗ್ರತಾ ಕ್ರಮವಾಗಿ ಗ್ರಾಮ ಪಂಚಾಯತತ್ ಮಟ್ಟದ ಕಾರ್ಯಪಡೆ ರಚಿಸಲಾಗಿದ್ದು, ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ನಡೆಸಲಾಗುತ್ತಿದೆ. ಈ ಸಮಯದಲ್ಲಿ ವಿರಗೋಟ ಗ್ರಾಮದ ವ್ಯಾಪ್ತಿಯ ಕುರುಬರದೊಡ್ಡಿಯಲ್ಲಿ ವಾಸಿಸುತ್ತಿರುವ ದೇವಪ್ಪ ಅವರನ್ನು ಮೇ 20 ರಂದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಮೇ 22 ರಂದು ಬಂದ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಅಂದಿನಿಂದ ಇಂದಿನವರೆಗೆ ಶಿಕ್ಷಕಿ, ಆಶಾ ಕಾರ್ಯಕರ್ತೆ ಮತ್ತು ಆರೋಗ್ಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಔಷಧಿಯ ಕಿಟ್‌ಗಳನ್ನು ನೀಡಿ ಕ್ವಾರಂಟೈನ್ಗೆ ಒಳಗಾಗುವಂತೆ ಸೂಚಿಸಿದ್ದಾರೆ. ಆದರೆ ಅದಕ್ಕೊಪ್ಪದೇ ಅಧಿಕಾರಿಗಳ ಕೈಗೂ ಸಿಗದೆ ದೇವಪ್ಪ ಓಡಾಡುತ್ತಿದ್ದ. ಅಲ್ಲದೇ ಮನೆಯ ಪಕ್ಕದಲ್ಲಿರುವ ಗುಡ್ಡವನ್ನು ಏರಿ ತಲೆಮಾರಿಸಿಕೊಂಡಿದ್ದ. ಈ ವೇಳೆ ಕಂದಾಯ ಸಿಬ್ಬಂದಿ, ಗ್ರಾಮ ಪಂಚಾಯತ್ ಸಿಬ್ಬಂದಿ, ಪೊಲೀಸರು ಈ ತನಿಗಾಗಿ ಹುಡುಕಾಡಿದ್ದಾರೆ. ಆದರೆ ದೇವಪ್ಪ ಮಾತ್ರ ಪರಾರಿಯಾಗಿದ್ದಾನೆ.
ಈ ಕುರಿತು ಕುಟುಂಬಸ್ಥರನ್ನು ವಿಚಾರಿಸಿದಾಗ ಏಕವಚನದಲ್ಲಿ ಮಾತನಾಡಿ, ಅಸಭ್ಯವಾಗಿ ವರ್ತಿಸಿದ್ದು, ಕೊರೊನಾ ವಾರಿಯರ್ಸ್ ಆದ ಆಶಾ ಕಾರ್ಯಕರ್ತೆ, ಅಂಗನವಾಡಿ ಶಿಕ್ಷಕಿ ಮತ್ತು ವೈದ್ಯಕೀಯ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಹಿನ್ನೆಲೆ ಕೆಲಸಕ್ಕೆ ಅಡ್ಡಿಪಡಿಸಿರುವುದರಿಂದ ಸರ್ಕಾರದ ಸೌಲಭ್ಯಗಳಾದ ಪಡಿತರ ಚೀಟಿ ಮತ್ತು ಗುಡಿಸಲಿನ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಕೋವಿಡ್ -19 ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಐಪಿಸಿ ಸೆಕ್ಷನ್ 269 , 270 ಅಡಿಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಿಸಲು ರಾಯಚೂರು ಉಪವಿಭಾಗಾಧಿಕಾರಿ ಆದೇಶಿಸಿದ್ದಾರೆ.