ರಾಯಚೂರು/ಬಳ್ಳಾರಿ : ಮಸ್ಕಿ ಕಾಂಗ್ರೆಸ್ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರನ್ನು ಪಟ್ಟಭದ್ರ ಹಿತಾಸಕ್ತಿಗಳು ಅಪಹರಣ ಮಾಡಿದ್ದು, ಶಾಸಕರನ್ನ ಹುಡುಕಿಕೊಡಿ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಣ್ಣ ಇರಬಗೇರಾ ಮಸ್ಕಿ ಠಾಣೆಗೆ ದೂರು ನೀಡಿದ್ದಾರೆ.
ಕಳೆದ 10 ದಿನಗಳಿಂದ ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪ್ ಗೌಡ ಪಾಟೀಲ್ ಕಾಣೆಯಾಗಿದ್ದು,ಇವರನ್ನ ಸಂಪರ್ಕಿಸಲು ಸತತವಾಗಿ ಪ್ರಯತ್ನ ಮಾಡಿದರೂ ಫಲಕಾರಿಯಾಗಿಲ್ಲ. ಅಲ್ಲದೇ ಕ್ಷೇತ್ರದಲ್ಲಿ ಬರಗಾಲ ಆಕ್ರಮಿಸಿರುವುದರಿಂದ ಕುಡಿವ ನೀರಿನ ಸಮಸ್ಯೆ ಎದುರಿಗಿದ್ದು, ಜನರು ಕಂಗಾಲಾಗಿದ್ದಾರೆ.
ಶಾಸಕರನ್ನ ಕೆಲವು ಪಟ್ಟಭದ್ರ ಹಿತಾಸಕ್ತಿ ಜನರು ಅಪಹರಣ ಮಾಡಿ ಅವರನ್ನ ಬಲವಂತವಾಗಿ ಕೂಡಿ ಹಾಕಿರಬಹುದೆಂಬ ಸಂಶಯ ವ್ಯಕ್ತವಾಗಿದೆ. ಹೀಗಾಗಿ ಶಾಸಕರನ್ನು ಹುಡುಕಿಕೊಡಿ ಎಂದು ಜಿಲ್ಲೆಯ ಮಸ್ಕಿ ಠಾಣೆಗೆ ತೆರಳಿ ದೂರು ದಾಖಲಿಸಲಾಗಿದೆ. ಇನ್ನು ಶಾಸಕ ಪ್ರತಾಪ್ ಗೌಡ, ಕಾಂಗ್ರೆಸ್ ಅತೃಪ್ತ ಶಾಸಕರಲ್ಲಿ ಗುರುತಿಸಿಕೊಂಡು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ರನ್ನು ಹುಡುಕಿ ಕೊಡಿ!
ಇನ್ನು ವಿಜಯನಗರ ಕ್ಷೇತ್ರದ ಶಾಸಕ ಬಿ.ಎಸ್.ಆನಂದ್ ಸಿಂಗ್ ಅವರನ್ನು ಹುಡುಕಿ ಕೊಡಿ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ (ಗ್ರಾಮಾಂತರ) ಪದಾಧಿಕಾರಿಗಳು ಇಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶಾಸಕ ಆನಂದ್ ಸಿಂಗ್ ಅವರು ರಾಜೀನಾಮೆ ಪರ್ವ ಆರಂಭವಾದಾಗಿಂದಲೂ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ. ಶಾಸಕರು ಕಾಣೆಯಾಗಿದ್ದು, ಕೂಡಲೇ ಅವರನ್ನು ಹುಡುಕಿಕೊಡಬೇಕೆಂದು ಕಾಂಗ್ರೆಸ್ ಮುಖಂಡ ಬಿ.ವಿ. ಶಿವಯೋಗಿ ನೇತೃತ್ವದ ಕಾರ್ಯಕರ್ತರು ಹೊಸಪೇಟೆ ನಗರ ಠಾಣೆಯ ಸಿಪಿಐ ಪ್ರಸಾದ್ ಗೋಖಲೆ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಶಾಸಕ ಆನಂದಸಿಂಗ್ ಅವರು ಕಳೆದ ಹತ್ತು ದಿನಗಳಿಂದ ನಾಪತ್ತೆಯಾಗಿದ್ದು, ಕ್ಷೇತ್ರದ ಜನರು ಕುಡಿಯೋಕೆ ನೀರಿಲ್ಲದೇ ಪರದಾಡುತ್ತಿದ್ದಾರೆ. ಆದರೆ, ನಮ್ಮ ಶಾಸಕರು ನಮ್ಮ ಕೈಗೆ ಸಿಕ್ತಿಲ್ಲ. ದಯವಿಟ್ಟು ಹುಡುಕಿಕೊಡಿ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಒಂದೆರಡು ದಿನಗಳು ಮಾತ್ರ ಹೊಸಪೇಟೆಗೆ ಬಂದಿದ್ರು. ಆ ಮೇಲೆ ನಾಪತ್ತೆಯಾಗಿದ್ದಾರೆ. ಅವರು ಎಲ್ಲಿಗೆ ಹೋಗಿದ್ದಾರೆ ಎಂಬುದನ್ನು ಪತ್ತೆಹಚ್ಚಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.