ರಾಯಚೂರು: ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ನೀಡಿರುವ ರಾಜೀನಾಮೆ ನಿಯಮ ಪ್ರಕಾರ ನೀಡಿಲ್ಲ. ಈ ಕುರಿತು ಈಗಾಗಲೇ ಸ್ಪೀಕರ್ ರಮೇಶ್ಕುಮಾರ್ ಸ್ಪಷ್ಟಪಡಿಸಿದ್ದಾರೆ. ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಅಮೆರಿಕದಿಂದ ಬಂದ ಬಳಿಕ ಆನಂದ್ ಸಿಂಗ್ ಜೊತೆ ಮಾತನಾಡಲಿದ್ದಾರೆ ಎಂದು ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಟಿ.ಎ.ಶರವಣ ಹೇಳಿದರು.
ಇಂದು ಮಂತ್ರಾಲಯಕ್ಕೆ ಹೋಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಇಂತಹ ಸಣ್ಣಪುಟ್ಟ ಸಮಸ್ಯೆಗಳು ಬರುತ್ತಿರುತ್ತವೆ. ಅವುಗಳನ್ನು ನಾವು ಎದುರಿಸಲಿದ್ದೇವೆ. ಆದರೆ, ಅಧಿಕಾರಿಕ್ಕಾಗಿ ಬಿಜೆಪಿ ತಿರುಕನ ಕನಸು ಕಾಣುತ್ತಿದೆ ಎಂದು ಲೇವಡಿ ಮಾಡಿದರು.
ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸರ್ಕಾರ ಬೀಳುತ್ತೆ ಅಂತ ಬಿಜೆಪಿ ಹೇಳುತ್ತಿದೆ. ಅದಕ್ಕೆ ಮಹತ್ವ ನೀಡುವ ಬದಲಿಗೆ ವಿರೋಧ ಪಕ್ಷದಲ್ಲಿ ಕುಳಿತು ಸಲಹೆ ನೀಡಲಿ. ಹೆಚ್.ವಿಶ್ವನಾಥ್ ರಾಜೀನಾಮೆ ದೀಢಿರ್ ಬೆಳವಣಿಗೆಯಲ್ಲ. ವಿಶ್ವನಾಥ್ ಅವರು ಆರು ತಿಂಗಳಿಂದ ರಾಜೀನಾಮೆ ಬಗ್ಗೆ ವರಿಷ್ಠರ ಗಮನಕ್ಕೆ ತಂದಿದ್ದರು. ಲೋಕಸಭೆ ಚುನಾವಣೆ ಹಿನ್ನೆಲೆ ರಾಜೀನಾಮೆ ಬೇಡ ಎಂದು ಹೆಚ್.ಡಿ.ಕುಮಾರಸ್ವಾಮಿ ಮತ್ತು ಹೆಚ್.ಡಿ.ದೇವೆಗೌಡರು ಹೇಳಿದ್ದರು. ರಾಜೀನಾಮೆ ನೀಡದಂತೆ ಮನವೊಲಿಸಲು ಕೂಡ ಪ್ರಯತ್ನಿಸಿದ್ದರು. ಆದ್ರೆ ಅದು ಯಶಸ್ವಿ ಆಗಿಲ್ಲ. ಹೆಚ್.ಕೆ.ಕುಮಾರಸ್ವಾಮಿ ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಜೆಡಿಎಸ್ ಪಾದಯಾತ್ರೆ ಬಗ್ಗೆ ಮಾತನಾಡಿದ ಅವರು, ವೈ.ಎಸ್.ವಿ.ದತ್ತಾ ಅವರು ಪಾದಯಾತ್ರೆಯ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ನಿಖಿಲ್ ಕುಮಾರಸ್ವಾಮಿಗೆ ಚುನಾವಣೆಯ ನಂತರ ರಾಜಕೀಯ ಅನುಭವ ಸಿಕ್ಕಿದೆ. ಹೀಗಾಗಿ ಅವರು ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.