ರಾಯಚೂರು: ವಿಧಾನಸಭಾ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸುಳ್ಳು ಹೇಳುವುದು ಸರಿಯಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಇಂದು ಭೇಟಿ ನೀಡಿ, ಗ್ರಾಮ ದೇವತೆ ಮಂಚಾಲಮ್ಮ ಹಾಗೂ ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮಹಾತ್ಮ ಗಾಂಧಿಯನ್ನು ಆರ್ ಎಸ್ ಎಸ್ ನವರು ಕೊಂದ್ರು ಅಂತಾರೆ. ಗಾಂಧಿ ಹತ್ಯೆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿತ್ತು. ಜವಾರಲಾಲ್ ನೆಹರು ಪ್ರಧಾನಿಯಾಗಿದ್ದರು. ಆದ್ರೆ, ಅವರಾಗಲೀ, ಇಲ್ಲವೇ ಕೋರ್ಟ್ ಆಗಲಿ, ಆ ಬಗ್ಗೆ ಹೇಳಲೇ ಇಲ್ಲ ಎಂದರು.
ಆರ್ಎಸ್ಎಸ್ ನವರೇ ಗಾಂಧಿಯನ್ನು ಹತ್ಯೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಹೀಗಾಗಿ ಅವರು ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು. ಸ್ವಾತಂತ್ರ ಹೋರಾಟದಲ್ಲಿ ಬಿಜೆಪಿಯ ಒಂದು ನಾಯಿ ಕೂಡಾ ಇರಲಿಲ್ಲ ಅಂತ ಅವರೇ ಹೇಳ್ತಾರಲ್ಲ?. ಹಾಗಿದ್ರೆ ಆರ್ಎಸ್ಎಸ್ ಅನ್ನು ಯಾಕೆ ಸುಮ್ಮನೆ ಬಿಟ್ಟಿದ್ದೀರಿ? ಎಂದು ಹರಿಹಾಯ್ದರು.
ಗಣೇಶ ಚತುರ್ಥಿ ಕುರಿತು ಸಿಎಂಗೆ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂಗೆ ಪತ್ರ ಬರೆದಿದ್ದೇನೆ. ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಆಚರಣೆ ಕುರಿತು ಮನವಿ ಮಾಡಲಾಗಿದೆ. ಸನಾತನ ಸಂಸ್ಕೃತಿಯನ್ನು ಕಾಪಾಡಬೇಕು. 1893 ರಲ್ಲಿ ಬಾಲ ಗಂಗಾಧರ ತಿಲಕ್ ಸಾರ್ವಜನಿಕವಾಗಿ ಇದನ್ನು ಶುರು ಮಾಡಿದ್ರು. ಇನ್ನೊಬ್ಬರಿಗೆ ತೊಂದರೆ ಕೊಡೋ ರೀತಿ ಆಗಬಾರದು. ಒಗ್ಗಟ್ಟಿನಿಂದ ಸಂಭ್ರಮಾಚರಣೆ ಮಾಡಬೇಕು. ಈಗಾಗಲೇ ಸಿಎಂ ಏಕಗವಾಕ್ಷಿ ಮೂಲಕ ಗಣೇಶ ಆಚರಣೆಗೆ ಸೂಚಿಸಿದ್ದಾರೆ ಎಂದರು.
ಅಮಿತ್ ಶಾ - ಜೂ.ಎನ್ಟಿಆರ್ ಭೇಟಿ ವಿಚಾರ: ಕೇಂದ್ರ ಸಚಿವ ಅಮಿತ್ ಶಾ ಮತ್ತು ನಟ ಜೂ.ಎನ್ ಟಿಆರ್ ಭೇಟಿ ವಿಚಾರಕ್ಕೆ, ನಮ್ಮದು ಐಡಿಯಾಲಜಿಕಲ್ ಮೂವ್ಮೆಂಟ್. ಫ್ಯಾಮಿಲಿ, ಜಾತಿ, ಬಲವರ್ಧನೆ ನಮ್ಮ ಐಡಿಯಾಲಜಿಯಲ್ಲ. ಎನ್ಟಿಆರ್ ರಾಜಕೀಯಕ್ಕೆ ಬಂದ್ರೆ ಸ್ವಾಗತಿಸುತ್ತೇವೆ. ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ವಿಚಾರ ಗೊತ್ತಿಲ್ಲ ಎಂದು ಹೇಳಿದರು.
ರಾಯರ ಮಠಕ್ಕೆ ಪತ್ನಿಸಮೇತ ಆಗಮಿಸಿ ಮೊದಲಿಗೆ ಶ್ರೀಮಂಚಾಲಮ್ಮ ದೇವಿ ದರ್ಶನ ಪಡೆದುಕೊಂಡ ಅವರು ವಿಶೇಷ ಪೂಜೆ ನೆರವೇರಿಸಿದರು. ಇದಾದ ಬಳಿಕ ರಾಯರ ಮೂಲ ಬೃಂದಾವನ ದರ್ಶನ ಪಡೆದು, ಪೀಠಾಧಿಪತಿ ಸುಬುದೇಂಧ್ರ ತೀರ್ಥರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು.
ಇದನ್ನೂ ಓದಿ: 40 ಅಲ್ಲ, ಬಿಬಿಎಂಪಿಯಲ್ಲಿ 50 ಪರ್ಸೆಂಟ್ ಕಮಿಷನ್.. ತುಷಾರ್ ಗಿರಿನಾಥ್‌ಗೆ ಗುತ್ತಿಗೆದಾರರ ಸಂಘದಿಂದ ದೂರು