ರಾಯಚೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಟಿಕೆಟ್ ಸಿಗದೆ ನಿರಾಶರಾದ ಮುಖಂಡರು ಪಕ್ಷಾಂತರ ನಡೆಸುತ್ತಿದ್ದಾರೆ. ಇದೀಗ ಮಾಜಿ ಸಂಸದ ಹಾಗೂ ರಾಯಚೂರು ಜಿಲ್ಲೆಯ ಹಾಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದಾರೆ.
ಮಾನವಿ ವಿಧಾನಸಭಾ ಕ್ಷೇತ್ರದಿಂದ ಪ್ರಬಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿ.ವಿ.ನಾಯಕ ಇಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಲ್ಲಿಸಿದ್ದು, ಮಾಜಿ ಸಿಎಂ ಸಿದ್ದರಾಮಯ್ಯನವರ ಗಮನಕ್ಕೆ ತಂದಿದ್ದಾರೆ.
2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಯಚೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಮೂಲಕ ಮೊದಲ ಬಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಇದಾದ ನಂತರ 2019ರಲ್ಲಿ ನಡೆದ ಲೋಕಸಭಾ ಚುನಾವಣೆಗೆ ಎರಡನೇ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ವಿರುದ್ಧ ಪರಾಜಿತಗೊಂಡರು.
ಇದನ್ನೂ ಓದಿ: ಗೋವಿಂದ ಕಾರಜೋಳ - ಮುರುಗೇಶ ನಿರಾಣಿ ನಾಮಪತ್ರ ಸಲ್ಲಿಕೆ.. ಸಿಎಂ ಬೊಮ್ಮಾಯಿ ಭಾಗಿ.. ಶೆಟ್ಟರ್ಗೆ ಟಾಂಗ್
ದೇವದುರ್ಗ ಕ್ಷೇತ್ರದಿಂದ ಸ್ಪರ್ಧೆಗೆ ಕಾಂಗ್ರೆಸ್ ಗ್ರೀನ್ ಸಿಗ್ನಲ್ : ಆದಾದ ನಂತರ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದರು. ಈಗ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರ ದೇವದುರ್ಗ ಕ್ಷೇತ್ರದಿಂದ ಸ್ಪರ್ಧೆಗೆ ಕಾಂಗ್ರೆಸ್ ಒಪ್ಪಿಗೆ ನೀಡಿತ್ತು. ಆದರೆ ಬಿ.ವಿ.ನಾಯಕ ಸ್ವಕ್ಷೇತ್ರದಿಂದ ಸ್ಪರ್ಧೆಗೆ ಹಿಂದೇಟು ಹಾಕಿ, ಮಾನವಿ ಕ್ಷೇತ್ರದಿಂದ ಸ್ಪರ್ಧಿಸುವ ಸಲುವಾಗಿ ಕಾಂಗ್ರೆಸ್ನಿಂದಲೇ ಟಿಕೆಟ್ಗಾಗಿ ಪೈಪೋಟಿ ನಡೆಸಿದ್ದರು. ಆದರೆ ಪಕ್ಷ ಮಾನ್ವಿಯಿಂದ ಸ್ಪರ್ಧೆಗೆ ಅವಕಾಶ ನಿರಾಕರಿಸಿದೆ. ಇದಕ್ಕೆ ತೀವ್ರ ಅಸಮಾಧಾನಗೊಂಡಿದ್ದರು.
ಇದನ್ನೂ ಓದಿ : ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ ಬಿಜೆಪಿ ಮೇಲೆ ಯಾವುದೇ ಪರಿಣಾಮವಿಲ್ಲ: ಆರಗ ಜ್ಞಾನೇಂದ್ರ
ಇತ್ತ ಬಿಜೆಪಿಯೂ ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿತ್ತು. ಟಿಕೆಟ್ ವಂಚಿತರಿಗೆ ಗಾಳ ಹಾಕುವುದಕ್ಕೆ ಬಿಜೆಪಿ ಪ್ರಯತ್ನ ನಡೆಸಿತ್ತು. ಇದೀಗ ಆ ಪ್ರಯತ್ನ ಸಫಲವಾಗಿದೆ. ಕಾಂಗ್ರೆಸ್ ಟಿಕೆಟ್ ವಂಚಿತ ಅಭ್ಯರ್ಥಿಯನ್ನು ಪಕ್ಷಕ್ಕೆ ಬರಮಾಡಿಕೊಂಡಿದೆ. ಬಿ.ವಿ.ನಾಯಕರನ್ನು ಮಾನವಿ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವುದು ಮಾತ್ರ ಬಾಕಿಯಿದೆ.
ಇದನ್ನೂ ಓದಿ : ಕೈ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಹುಬ್ಬಳ್ಳಿ ಧಾರವಾಡದಿಂದ ಶೆಟ್ಟರ್, ಸಿಎಂ ಬೊಮ್ಮಾಯಿ ವಿರುದ್ಧ ಮೊಹಮ್ಮದ್ ಸವಣೂರು ಕಣಕ್ಕೆ