ರಾಯಚೂರು: ವಿಷಕಾರಿ ರಾಸಾಯನಿಕ ಸೋರಿಕೆಯಿಂದ ಓರ್ವ ಸಿಬ್ಬಂದಿ ಮೃತಪಟ್ಟಿದ್ದು ಈ ಹಿನ್ನೆಲೆ ಲ್ಯಾಬೋರೇಟರೀಸ್ ಪ್ರೈವೇಟ್ ಲಿಮಿಟೆಡ್ ಮಾಲೀಕರ ವಿರುದ್ಧ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ಇಂದು ಪ್ರಕರಣ ದಾಖಲಾಗಿದೆ.
ತಾಲೂಕಿನ ವಡ್ಲೂರು ಕ್ರಾಸ್ ಬಳಿಯ ಫ್ಯಾಕ್ಟರಿಯಲ್ಲಿ ನಿನ್ನೆ ಸಂಜೆ ವಿಷಕಾರಿ ರಾಸಾಯಿನಿಕ ಸೋರಿಕೆಯಿಂದ ಅಸ್ವಸ್ಥಗೊಂಡ ಓರ್ವ ಕಾರ್ಮಿಕ ಮೃತಪಟ್ಟಿದ್ದು ಮೃತ ಲಕ್ಷ್ಮಣ ಸಂಬಂಧಿ ಹಾಗೂ ಪ್ರತ್ಯಕ್ಷದರ್ಶಿ ಮಹೇಶ ಕಂಪನಿ ಮಾಲೀಕರ ವಿರುದ್ಧ ಈ ದೂರು ನೀಡಿದ್ದಾರೆ.
ಕಲಂ 284, 287, 336, 338, 304 ಹಾಗೂ 34ರ ಅಡಿಯಲ್ಲಿ ರಾಯಚೂರು ಲ್ಯಾಬೋರೇಟರೀಸ್ ಮಾಲೀಕ ವಿಜಯೇಂದ್ರ, ಪ್ರೋಡಕ್ಷನ್ ವಿಭಾಗದ ಮುಖ್ಯಸ್ಥ ಗಿರಿಧರ ಗೋಪಾಲ್, ಹೆಚ್ಆರ್ ವಿಭಾಗದ ಮುಖ್ಯಸ್ಥ ಆಶಿಷ್ ಹಾಗೂ ಬಸವರಾಜ ಸೇರಿದಂತೆ ಇತರರ ವಿರುದ್ಧ ದೂರು ದಾಖಲಾಗಿದೆ.
ಕಂಪನಿಯ ಉತ್ಪಾದನಾ ಘಟಕದಲ್ಲಿ ಕಾರ್ಮಿಕರು ಸೋಡಿಯಂ ಪೌಡರ್ಅನ್ನ ಕೈಯಿಂದ ರಿಯಾಕ್ಟರ್ ಒಳಗೆ ಹಾಕುತ್ತಿರುವಾಗ ಪೌಡರಿನಲ್ಲಿದ್ದ ವಿಷಕಾರಿ ರಾಸಾಯನಿಕವು (ಫ್ಯಾರಸೈನೋ ಫಿನಾಲ್ ಹಾಗೂ ಸಲ್ಫೂರಿಕ್ ಆ್ಯಸಿಡ್ಗಳ ಕೆಮಿಕಲ್) ಗಾಳಿಯಲ್ಲಿ ಕಲುಷಿತಗೊಂಡು ಬಾಯಿಯೊಳಗೆ ಹೋಗಿದ್ದರಿಂದ ಲಕ್ಷ್ಮಣ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ. ಘಟನೆಯಲ್ಲಿ ಅಪರೇಟರ್ ಅರವಿಂದ ಅಶ್ವಸ್ಥಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.