ರಾಯಚೂರು: ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರದಲ್ಲಿ ಇದೀಗ ಸಚಿವ ಸ್ಥಾನಕ್ಕೆ ಶಾಸಕರು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಹೈದ್ರಾಬಾದ್ ಕರ್ನಾಟಕದ ರಾಯಚೂರು ಜಿಲ್ಲೆಯಲ್ಲೂ ಸಚಿವ ಸ್ಥಾನದ ಆಕ್ಷಾಂಕ್ಷಿಗಳಲ್ಲಿ ನಿರೀಕ್ಷೆಗಳು ಗರಿಗೆದರಿವೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಪತನ ಬಳಿಕ, ನೂತನವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇದೀಗ ರಾಜ್ಯದಲ್ಲಿ ನೂತನವಾಗಿ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರದ ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದ್ದು, ದೇವದುರ್ಗ ಶಾಸಕ ಕೆ. ಶಿವನಗೌಡ ನಾಯಕ ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಶಾಸಕ ಕೆ.ಶಿವನಗೌಡ ನಾಯಕ 4ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮೊದಲ ಬಾರಿಗೆ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಬಳಿಕ, ಬಿಜೆಪಿಯ ಅಪರೇಷನ್ ಕಮಲಕ್ಕೆ ಒಳಗಾಗಿ ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಮರು ಚುನಾವಣೆಯಲ್ಲಿ ಗೆಲುವು ಸಾಧಿಸಿ ಸಚಿವ ಸ್ಥಾನ ಪಡೆದುಕೊಂಡಿದ್ದರು.
ಆದ್ರೆ ಈ ಬಾರಿ ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆದಿದೆ. ರಾಯಚೂರು ಕ್ಷೇತ್ರದ ಶಾಸಕ ಡಾ. ಶಿವರಾಜ್ ಪಾಟೀಲ್ ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಶಿವರಾಜ್ ಪಾಟೀಲ್ ಬೆಂಬಲಿಗರು ಸಚಿವ ಸ್ಥಾನ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಇಬ್ಬರು ಬಿಜೆಪಿ ಶಾಸಕರ ಮಧ್ಯೆ ಕಾಂಗ್ರೆಸ್ ಅತೃಪ್ತ ಶಾಸಕರಲ್ಲಿ ಗುರುತಿಸಿಕೊಂಡಿದ್ದ ಹಾಗೂ ಶಾಸಕ ಸ್ಥಾನದಿಂದ ಅನರ್ಹಗೊಂಡ ಪ್ರತಾಪ್‌ಗೌಡ ಪಾಟೀಲ್ ಅಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ ಎನ್ನಲಾಗ್ತಿದೆ. ಹಾಗಾಗಿ ಅವರಿಗೂ ಮುಂದೆ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕಾಗಿದೆ. ಸದ್ಯ ಅವರು ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದು, ಮುಂದೆ ಪ್ರತಾಪ್‌ಗೌಡರಿಗೆ ಸಚಿವ ಸ್ಥಾನ ಸಿಗುತ್ತದೆಯೋ, ಇಲ್ಲವೊ ಎನ್ನುವ ಗೊಂದಲ ಮೂಡಿದೆ.