ರಾಯಚೂರು: ಕಳೆದ 8 ತಿಂಗಳಿನಿಂದ ರಾಯಚೂರಿನ ಪಡಿತರ ಅಂಗಡಿಗಳಿಗೆ ಸರ್ಕಾರ ಕಮಿಷನ್ ಹಣ ಪಾವತಿಸಿಲ್ಲ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಸರ್ಕಾರ ನ್ಯಾಯಬೆಲೆ ಅಂಗಡಿಗಳ ಮೂಲಕ ಫಲಾನುಭವಿಗಳಿಗೆ ಆಹಾರ ಧಾನ್ಯಗಳನ್ನ ವಿತರಣೆ ಮಾಡುತ್ತದೆ. ಸರ್ಕಾರ ಸರಬರಾಜು ಮಾಡುವ ಅಕ್ಕಿ, ಗೋಧಿ, ತೊಗರಿ ಬೆಳೆ ಸೇರಿದಂತೆ ಆಹಾರ ಧಾನ್ಯಗಳನ್ನು ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ನಿಗದಿತ ಪ್ರಮಾಣದಲ್ಲಿ ನೀಡಲಾಗುತ್ತದೆ. ಹೀಗೆ ಫಲಾನುಭವಿಗಳಿಗೆ ತಲುಪಿಸುವ ಪಡಿತರ ಅಂಗಡಿ ಮಾಲೀಕರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಮಿಷನ್ ಹಣ ಪಾವತಿಸಬೇಕು. ಕೊರೊನಾ ಸಂಕಷ್ಟದ ನಡುವೆಯೂ ಕೆಲಸ ಮಾಡಿದ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕಮಿಷನ್ ಹಣ ಪಾವತಿ ಮಾಡಿಲ್ಲ ಅಂತಿದ್ದಾರೆ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘಟನೆ ಮುಖಂಡರು.
ರಾಯಚೂರು ಜಿಲ್ಲೆಯ ಏಳು ತಾಲೂಕುಗಳಲ್ಲಿ ಸುಮಾರು 700 ನ್ಯಾಯಬೆಲೆ ಅಂಗಡಿಗಳಿವೆ. ಸರ್ಕಾರದಿಂದ ಬರುವ ಆಹಾರ ಧಾನ್ಯಗಳು ಟ್ರಾನ್ಸ್ಪೋರ್ಟ್ ಬಾಡಿಗೆ, ಅಂಗಡಿಯಲ್ಲಿ ಕೆಲಸ ಮಾಡುವವರಿಗೆ, ಅಂಗಡಿಗೆ ಬಾಡಿಗೆಯನ್ನೂ ನ್ಯಾಯಬೆಲೆ ಅಂಗಡಿಯವರು ಪಾವತಿಸಬೇಕು. ಆ ಬಳಿಕ ನಿಗದಿತ ಸಮಯದಲ್ಲಿ ಸರ್ಕಾರ ಪಾವತಿಸಬೇಕು. ಆದ್ರೆ ಆಹಾರ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ, ನಿರ್ಲಕ್ಷ್ಯದಿಂದ ಇದೆಲ್ಲವೂ ವಿಳಂಬವಾಗುತ್ತಿದೆ ಎಂದು ಪಡಿತರ ವಿತರಕರು ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ 8 ತಿಂಗಳ ಕಮಿಷನ್ ಹಣ ಸುಮಾರು ನಾಲ್ಕೈದು ಕೋಟಿ ರೂಪಾಯಿ ಬಾಕಿಯಿದ್ದು, ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡುವಂತೆ ನ್ಯಾಯಬೆಲೆ ಅಂಗಡಿ ಮಾಲೀಕರು ಒತ್ತಾಯಿಸಿದ್ದಾರೆ.
ಕೊರೊನಾ ಸಂಕಷ್ಟದ ಸಮಯದಲ್ಲಿ ಸರ್ಕಾರ ಕಮಿಷನ್ ಹಣ ಪಾವತಿ ಮಾಡದೆ ಇರುವುದರಿಂದ ನ್ಯಾಯಬೆಲೆ ಅಂಗಡಿಯವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಕಮಿಷನ್ ಹಣ ನೀಡುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಹಕ್ಕಿ ಜ್ವರ; ಉತ್ತರಾಖಂಡ್‌ನಲ್ಲಿ 40 ತುರ್ತು ಸ್ಪಂದನಾ ತಂಡಗಳ ರಚನೆ