ರಾಯಚೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಾನವಿ ತಾಲೂಕಿನ ಕರೇಗುಡ್ಡ ಗ್ರಾಮದಲ್ಲಿ ವಾಸ್ತವ್ಯ ಮುಗಿಸಿಕೊಂಡು, ಬೀದರ್‌ಗೆ ತೆರಳಿದ್ರು.
ಕರೇಗುಡ್ಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದ ಸಿಎಂ ಬೆಳಗ್ಗೆ 5 ಗಂಟೆಯ ಸುಮಾರಿಗೆ ವಾಸ್ತವ್ಯ ಮುಗಿಸಿಕೊಂಡು ಬೀದರ್ ಜಿಲ್ಲೆಯ ಕಡೆ ಪಯಣ ಬೆಳೆಸಿದ್ದಾರೆ.
ಸಿಎಂ ತೆರಳಿದ ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡರು, ಸಿಎಂ ಗ್ರಾಮ ವಾಸ್ತವ್ಯ ಸಂಪೂರ್ಣ ಯಶಸ್ಸು ಕಂಡಿದೆ. ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಸಿಎಂಗೆ ಜನರ ಮಧ್ಯೆ ಹೋಗಿ ಸಮಸ್ಯೆ ಅರಿತು ಸರ್ಕಾರ ನಡೆಸುವ ಬಯಕೆ ಇದೆ. ಅಂತೆಯೇ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆ ಎಂದರು.
ಪ್ರತಿಪಕ್ಷದವರು ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಸಿಗುತ್ತಿರುವ ಬೆಂಬಲ ನೋಡಿ ಟೀಕಿಸುತ್ತಿದ್ದಾರೆ. ತುಂಗಭದ್ರಾ ಜಲಾಶಯದಲ್ಲಿನ ಹೂಳಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಬದ್ಧವಾಗಿದೆ. ವೈಟಿಪಿಎಸ್ ಕಾರ್ಮಿಕರ ಹೋರಾಟಕ್ಕೆ ಸಂಬಂಧಿಸಿದಂತೆ ಅನಗತ್ಯ ಗೊಂದಲ ಸೃಷ್ಟಿಸಲಾಯಿತು. ಸಿಎಂ ಹೋರಾಟಗಾರರ ಜತೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ನಂತರವೂ ಸಿಎಂ ಬಸ್ ಅಡ್ಡಗಟ್ಟಿದ್ದು ತಪ್ಪು. ಯಾವ ಉದ್ದೇಶದಿಂದ ಹೋರಾಟಗಾರರು ಹಾಗೆ ಮಾಡಿದರು ಅನ್ನೋದು ಗೊತ್ತಾಗುತ್ತಿಲ್ಲ. ಈ ರೀತಿ ಮಾಡುವುದರಿಂದ ಪ್ರಚಾರ ಸಿಗಬಹುದಷ್ಟೇ ಎಂದು ಸಚಿವ ನಾಡಗೌಡ ಹೇಳಿದರು.
ಜಿಲ್ಲೆಯ ವಿವಿಧ ಮಠಗಳ ಮಠಾಧೀಶರು ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಸಮಸ್ಯೆ ಪರಿಹಾರಕ್ಕೆ ಸಿಎಂ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಒತ್ತಾಯಿಸಿದ್ದು, ನದಿ ಜೋಡಣೆ ಮೂಲಕ ಪರಿಹಾರ ಸಾಧ್ಯ ಎಂಬ ಸಲಹೆಯನ್ನೂ ನೀಡಿದ್ದಾರೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಪರಿಹಾರ ಕಂಡುಕೊಳ್ಳಲಿದೆ ಎಂದು ಸಚಿವ ನಾಡಗೌಡ ಭರವಸೆ ನೀಡಿದರು.