ರಾಯಚೂರು: ಕಾಂಗ್ರೆಸ್ನವರು ಹಣ, ಹೆಂಡ, ತೋಳ್ ಬಲದಿಂದ ಜಾತಿಯ ವಿಷ ಬೀಜ ಬಿತ್ತಿ ಚುನಾವಣೆ ಗೆಲ್ಲುವ ಭ್ರಮೆಯಲ್ಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ಸಿಂಧನೂರು ತಾಲೂಕಿನ ತುರುವಿಹಾಳ ಗ್ರಾಮದಲ್ಲಿ ಮಸ್ಕಿ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎನ್ನುವ ವಿಶ್ವಾಸವಿದೆ. ನನಗೆ ಜಾತಿ ಗೊತ್ತಿಲ್ಲ, ಎಲ್ಲರನ್ನೂ ಒಂದೇ ರೀತಿ ನೋಡುತ್ತಿದ್ದೇನೆ. ರೈತರಿಗೆ ಬೆಂಬಲ ಬೆಲೆ ನೀಡಿದ್ದೇನೆ, ಅಂಗವಿಕಲ ವೇತನ, ವಿಧವಾ ವೇತನ ನೀಡುತ್ತಿದ್ದೇನೆ. ಮಹಿಳೆಯರಿಗಾಗಿ ಬಜೆಟ್ನಲ್ಲಿ 33 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇನೆ ಎಂದರು.
ಓದಿ : ಮಸ್ಕಿ ಉಪಚುನಾವಣೆ.. ಗಚ್ಚಿನಮಠಕ್ಕೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ!
ಉಪಚುನಾವಣೆ ನಡೆಯಲಿರುವ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತೆ, ಕಾಂಗ್ರೆಸ್ ಮುಳುಗುತ್ತಿದೆ. ಇವತ್ತು ಅಥವಾ ನಾಳೆ ಭತ್ತ ಖರೀದಿ ಕೇಂದ್ರ ಆರಂಭವಾಗಲಿದೆ. ರೈತರಿಗೆ ಅನುಕೂಲವಾಗಲಿ ಎಂದು ನಿಮ್ಮ ಬೇಡಿಕೆ ಈಡೇರಿಸುತ್ತಿದ್ದೇನೆ. ಕನಕ ನಾಲಾ ಯೋಜನೆಯಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಕಲ್ಯಾಣ ಕರ್ನಾಟಕ್ಕೆ ಒಂದೂವರೆ ಸಾವಿರ ಕೋಟಿ ತೆಗೆದಿಟ್ಟಿದ್ದೇನೆ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಮಾಡುತ್ತೇನೆ. ತುಂಗಭದ್ರಾ ಜಲಾಶಯಕ್ಕೆ ನವಲಿ ಬಳಿ ಪರ್ಯಾಯ ಜಲಾಶಯ ನಿರ್ಮಾಣಕ್ಕೆ ತೀರ್ಮಾನ ಮಾಡಿದ್ದೇವೆ. ಕಾಗಿನೆಲೆ ಅಭಿವೃದ್ಧಿಗೆ 10 ಕೋಟಿ ನೀಡಿದ್ದಾನೆ ಎಂದು ಹೇಳಿದರು.
ಮುಖಮಂತ್ರಿಯಾಗಿ ಹೇಳ್ತಿನಿ ಪ್ರತಾಪಗೌಡ ಗೆಲ್ಬೇಕು. 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದರೆ ನೀವು ಏನೇ ಕೇಳಿದರೂ ಮಾಡಿಕೊಡುತ್ತೇನೆ. ಏ. 17 ಆದ ಮೇಲೆ ಮಸ್ಕಿ, ಬಸವಕಲ್ಯಾಣ, ಬೆಳಗಾವಿಯಲ್ಲಿ ಕಾಂಗ್ರೆಸ್ ಅಡ್ರೆಸ್ ಇರಲ್ಲ. ಹೆಸರು ಹೇಳಲು ಇಚ್ಛಿಸದ ಕಾಂಗ್ರೆಸ್ ಮುಖಂಡರಿಗೆ ಹೇಳುತ್ತಿದ್ದೇನೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಮಕುಮಾರ್ಗೆ ಟಾಂಗ್ ನೀಡಿದರು.