ರಾಯಚೂರು : ಕೊರೊನಾ ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗೊಂದಲದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದು, ಯಾವುದೇ ಪೂರ್ವ ಸಿದ್ಧತೆಯಿಲ್ಲದೆ ತನ್ನ ನಿರ್ಧಾರಗಳನ್ನು ಪ್ರಕಟಿಸುತ್ತಿವೆ ಎಂದು ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜ್ ಆರೋಪಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕೊರೊನಾ 2ನೇ ಅಲೆ ವ್ಯಾಪಕವಾಗಿದೆ. ಹೆಚ್ಚಾಗಿ ಸೋಂಕು ಹರಡುವ ಸಾಧ್ಯತೆಗಳಿವೆ.
ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ತಜ್ಞರು ಮತ್ತು ಸಂಸತ್ತಿನ ಸ್ಥಾಯಿ ಸಮಿತಿ 9 ತಿಂಗಳ ಹಿಂದೆಯೇ ನೀಡಿದ್ದ ಸಲಹೆಯನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ. ಇದರಿಂದ ಕೊರೊನಾ ವ್ಯಾಪಕವಾಗಿ ಜನರು ಪ್ರಾಣ ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗದೆ ಎಂದರು.
95 ದೇಶಗಳಿಗೆ ಲಸಿಕೆ ನೀಡಿಕೆ : ಕೊರೊನಾ ಹತೋಟಿಗೆ ಲಸಿಕೆ ಪರಿಹಾರವಾಗಿದೆ. ಕೋವಿಡ್ ಲಸಿಕೆಯನ್ನು 20 ಕಂಪನಿಗಳು ತಯಾರಿಸುತ್ತಿವೆ. 2 ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಸರ್ಕಾರ ಅಲ್ಲಿಂದ ಶೇ.50ರಷ್ಟು ಲಸಿಕೆ ಪಡೆಯುತ್ತಿವೆ.
ಆದರೆ, ದೇಶದ ಜನರಿಗೆ ಲಸಿಕೆ ನೀಡುವ ಬದಲು 95 ದೇಶಗಳಿಗೆ ಲಸಿಕೆ ನೀಡುತ್ತಿರುವುದರಿಂದ ದೇಶದಲ್ಲಿ ಲಸಿಕೆ ಸಮಸ್ಯೆ ಉದ್ಬವಿಸುವಂತೆ ಮಾಡಿದೆ ಎಂದು ಆರೋಪಿಸಿದರು.
ಲಸಿಕೆ ಇಲ್ಲದೆ ಅಭಿಯಾನಕ್ಕೆ ಸಿಎಂ ಚಾಲನೆ : ಕೋಟ್ಯಂತರ ಸಂಖ್ಯೆಯಲ್ಲಿ 18 ವರ್ಷ ಮೇಲ್ಪಟ್ಟವರಿದ್ದಾರೆ. ಪ್ರಸ್ತುತ 18 ಕೋಟಿ ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. ಈಗ ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದನ್ನು ತಾತ್ಕಾಲಿಕವಾಗಿ ತಡೆ ನೀಡಿರುವುದಾಗಿ ಪ್ರಕಟಿಸಿದೆ. ಲಸಿಕೆ ಲಭ್ಯತೆಯೇ ಇಲ್ಲದಿರುವಾಗ ಮುಖ್ಯಮಂತ್ರಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ ಆರೋಪಿಸಿದರು.
ಲಸಿಕೆ ಕೊರತೆ : ಜಿಲ್ಲೆಯಲ್ಲಿ 16.50 ಲಕ್ಷ ಜನಸಂಖ್ಯೆಯಿದ್ದು, 2.22 ಲಕ್ಷ ಮುಖ್ಯ ವಾಹಿನಿಯಲ್ಲಿರುವವರಿಗೆ ಲಸಿಕೆ ಹಾಕಲಾಗಿದೆ. 1.30 ಲಕ್ಷ ಜನರು 2ನೇ ಡೋಸ್‌ಗಾಗಿ ಕಾಯುತ್ತಿದ್ದಾರೆ. ಲಸಿಕೆ ಕೊರತೆಯನ್ನು ಮುಚ್ಚಿ ಹಾಕಲು 2ನೇ ಡೋಸ್ ಲಸಿಕೆ ಹಾಕಿಸಿಕೊಳ್ಳುವ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ರಾಜ್ಯದಲ್ಲಿ ಬೆಡ್, ಆಕ್ಸಿಜನ್, ವೆಂಟಿಲೇಟರ್ ಸೇರಿದಂತೆ ಎಲ್ಲದರ ಸಮಸ್ಯೆಯಿದೆ. ಶವ ಸಂಸ್ಕಾರಕ್ಕೂ ಜನರು ಪರದಾಡಬೇಕಿದೆ. ಆದರೂ ರಾಜ್ಯ ಸರ್ಕಾರ ಸಮರ್ಥನೆಯಲ್ಲಿಯೇ ತೊಡಗಿದೆ. ಪರಸ್ಥಿತಿಯನ್ನು ನಿಯಂತ್ರಿಸುವಲ್ಲಿಯೂ ಗೊಂದಲವಿದೆ ಎಂದು ದೂರಿದರು.
ಹತ್ತು ಸಾವಿರ ನೀಡಿ : ಲಾಕ್‌ಡೌನ್ ಘೋಷಣೆಯಿಂದ ಕಾರ್ಮಿಕರು, ಬಡವರು ಹಾಗೂ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ಅವರಿಗೆ ಜೀವನ ನಡೆಸಲು 10 ಸಾವಿರ ರೂ.ಗಳನ್ನು ಬಿಡುಗಡೆ ಮಾಡಬೇಕು ಎಂದು ಎನ್.ಎಸ್.ಬೋಸರಾಜು ಒತ್ತಾಯಿಸಿದರು.