ರಾಯಚೂರು: ಮೂಲಭೂತ ಸಮಸ್ಯೆಗಳ ನಡುವೆ ಅಭಿವೃದ್ಧಿ ಕಾಣುತ್ತಿರುವ ನಗರಗಳಲ್ಲಿ ರಾಯಚೂರು ನಗರವೂ ಒಂದು. ಜಿಲ್ಲಾಡಳಿತ ಪ್ರದೇಶದಲ್ಲಿ ಸುರಕ್ಷಿತ ಹಾಗು ಭದ್ರತೆಯ ದೃಷ್ಟಿಯಿಂದ ನಗರದ ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ ಜಿಲ್ಲೆಯಲ್ಲಿರುವ ಬಹುತೇಕ ಸಿಸಿ ಕ್ಯಾಮೆರಾಗಳು ಕೆಲಸ ಮಾಡುತ್ತಿಲ್ಲ.
ಕಳೆದ ಹಲವು ವರ್ಷಗಳ ಹಿಂದೆ ನಗರದ ಬಸವೇಶ್ವರ ಸರ್ಕಲ್, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಚಂದ್ರಮೌಳೇಶ್ವರ ವೃತ್ತ, ಬಿ.ಆರ್.ಬಿ.ಸರ್ಕಲ್, ಗಂಜ್ ಸರ್ಕಲ್, ಆರ್‌ಟಿಒ ವೃತ್ತ, ವಾಸವಿ ನಗರ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ, ಎಸ್ಪಿ(ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ) ಕಚೇರಿಯಲ್ಲಿ ಕಂಟ್ರೋಲ್ ರೂಂ ಮೂಲಕ ನಗರದ ಚಲನವನಲಗಳ ಮೇಲೆ ನಿಗಾ ಇಡಲಾಗುತ್ತಿತ್ತು.
ಆರಂಭದಲ್ಲಿ ಸಿಸಿಟಿವಿ ಕ್ಯಾಮೆರಾಗಳ ನಿರ್ವಹಣೆ ಸಮರ್ಪಕವಾಗಿ ನಡೆದಿದೆ. ಸಂಚಾರಿ ನಿಯಮ ನಿರ್ಲಕ್ಷ್ಯ, ಸಿಗ್ನಲ್ ಜಂಪ್ ಮಾಡಿದವರಿಗೆ ದಂಡ ವಿಧಿಸುವ ನಿಟ್ಟಿನಲ್ಲಿ ವಾಹನಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗುತ್ತಿತ್ತು. ಆದರೆ ಕ್ರಮೇಣ ಸಿಸಿ ಕ್ಯಾಮೆರಾ ದುರಸ್ತಿಗೆ ಬಂದಿದ್ದು, ಅನುದಾನ ಕೊರತೆಯೂ ಎದುರಾಯಿತು. ನಿರ್ವಹಣೆಗಾಗಿ ಇಲಾಖೆಯಿಂದ ಅನುದಾನ ಕೋರಿ ಸ್ಥಳೀಯ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ, ಕೆಕೆಆರ್‌ಡಿಬಿ (ಹೆಚ್‌ಕೆಆರ್‌ಡಿಬಿ) ಇಲಾಖೆಯಿಂದ ಪ್ರಸ್ತಾವನೆಯನ್ನು ಸಲ್ಲಿಸಲಾಯಿತು. ಇಲಾಖೆಯ ಮನವಿಗೆ ಸೂಕ್ತ ಸ್ಪಂದನೆ ದೊರೆಯಲಿಲ್ಲ. ಹೀಗಾಗಿ ಹಂತಹಂತವಾಗಿ ನಗರದಲ್ಲಿನ ಸಿಸಿ ಕ್ಯಾಮೆರಾಗಳು ಒಂದೊಂದಾಗಿಯೇ ಕೆಲಸ ನಿಲ್ಲಿಸಿವೆ.
ನಗರದಲ್ಲಿ ಬಂದೋಬಸ್ತ್, ಕಳ್ಳತನ ಸೇರಿದಂತೆ ಇತರೆ ಅಪರಾಧ ಮಾಡಿದವರನ್ನು ಸೆರೆಹಿಡಿಯಲು ಸಿಸಿ ಕ್ಯಾಮೆರಾಗಳು ಪೊಲೀಸ್ ಇಲಾಖೆಗೆ ಸಹಕಾರಿಯಾಗುತ್ತವೆ. ಆದರೆ ನಗರದಲ್ಲಿ ಇತ್ತೀಚೆಗೆ ಅಪರಾಧಗಳು ಹೆಚ್ಚಾಗಿವೆ ಎನ್ನುವ ದೂರುಗಳಿವೆ. ಕಳ್ಳತನ, ಕೊಲೆ ಸೇರಿದಂತೆ ಕೃತ್ಯಗಳು ನಡೆದಾಗ ಇಲಾಖೆ ಸುತ್ತಮುತ್ತಲಿನ ಅಳವಡಿಸಿರುವ ಸಿಸಿ ಕ್ಯಾಮೆರಾ ದೃಶ್ಯಗಳನ್ನು ತೆಗೆದುಕೊಂಡು ತನಿಖೆ ನಡೆಸುತ್ತದೆ.
ಎಸ್ಪಿ ಪ್ರತಿಕ್ರಿಯೆ: ಸಿಸಿ ಕ್ಯಾಮೆರಾಗಳ ಪೈಕಿ ನಿರ್ವಹಣೆ ಮಾಡುತ್ತಿರುವ ಕೆಲವನ್ನು ಆಯಾ ಪೊಲೀಸ್ ಠಾಣೆಗಳು ನಿಗಾ ವಹಿಸುತ್ತಿವೆ. ಈ ಬಗ್ಗೆ ಎಸ್ಪಿ ಪ್ರತಿಕ್ರಿಯಿಸಿ, "ಈಗ ನಗರಾಭಿವೃದ್ಧಿ ಪ್ರಾಧಿಕಾರ 50 ಲಕ್ಷ ರೂಪಾಯಿ ಅನುದಾನ ನೀಡಿದೆ. ಅದರಲ್ಲಿ ಟೆಂಡರ್ ಕರೆದು, ನಗರದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ" ಎಂದರು.
ಇದನ್ನೂ ಓದಿ: ಶೀಘ್ರದಲ್ಲೇ ಬೆಂಗಳೂರಿನಲ್ಲಿ ಚಿರತೆ ಪಡೆ ಕಾರ್ಯಾರಂಭ: ಸಚಿವ ಈಶ್ವರ ಖಂಡ್ರೆ