ರಾಯಚೂರು: ಇಂದಿಗೂ ಸಮಾಜದಲ್ಲಿ ಜಾತಿ ವ್ಯವಸ್ಥೆ ಬೇರೂರಿದೆ. ವರ್ಣ ವ್ಯವಸ್ಥೆಯಿಂದ ಜಾತಿ ಅಳಿಯಲು ಸಾಧ್ಯವಿಲ್ಲ, ನಾವೆಲ್ಲಾ ಶೂದ್ರರು. ನಾವು ಸ್ವಾಭಿಮಾನಿಗಳಾಗಲು ಶಿಕ್ಷಿತರಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಾಗಿನೆಲೆ ಗುರು ಪೀಠದ ತಿಂಥಣಿ ಬ್ರಿಡ್ಜ್ನಲ್ಲಿ ಆಯೋಜಿಸಿದ್ದ ಹಾಲುಮತ ಸಂಸ್ಕೃತಿ ವೈಭವ 2021 ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಅಭಿವೃದ್ಧಿ ಹೊಂದಬೇಕಾದ್ರೆ ಮೊದಲು ನಾವು ಶಿಕ್ಷಿತರಾಗಬೇಕು, ಶಿಕ್ಷಣದಿಂದಲೇ ಅಭಿವೃದ್ಧಿ ಸಾಧ್ಯ ಎಂಬುದನ್ನು ನಾವು ಅರಿಯಬೇಕು. ಆಗ ಮಾತ್ರ ನಾವು ಸ್ವಾಭಿಮಾನಿಗಳಾಗಿ ಬದುಕಲು ಸಾಧ್ಯ ಎಂದರು.
ನಾನು ಕುರುಬ ಸಮಾಜದ ವಿರೋಧಿ ಅಲ್ಲ. ಆದರೆ ನನಗೆ ಮೀಸಲಾತಿ ಪಾಠ ಹೇಳಲು ಬರುತ್ತಿದ್ದಾರೆ. ನನ್ನ 40 ವರ್ಷಗಳ ರಾಜಕೀಯದಲ್ಲಿ ನಾನು ಯಾರಿಗೂ ತಲೆ ಬಾಗಿಲ್ಲ. ಸ್ವಾಭಿಮಾನದಿಂದ ಕಾರ್ಯನಿರ್ವಹಿಸಿದ್ದೇನೆ, ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡಿದ ನೆಮ್ಮದಿ ನನಗಿದೆ ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಉಡುಪಿಯಲ್ಲಿ ಕನಕ ಗೋಪುರ ಒಡೆದಾಗ ಈಶ್ವರಪ್ಪ ಎಲ್ಲಿದ್ದರು? ಆಗ ಹೋರಾಟಕ್ಕೆ ಕರೆದಾಗ ಇದು ಕುರಬರಿಗೆ ಸೀಮಿತ ಎಂದಿದ್ದ ಅವರು, ಇಂದು ಎಸ್ಟಿ ಹೋರಾಟ ನಡೆಸುತ್ತಿದ್ದಾರೆ. ಈಶ್ವರಪ್ಪ ಸಚಿವರಾಗಿದ್ದಾಗಲೇ ಸಚಿವ ಸಂಪುಟದಲ್ಲಿ ಚರ್ಚಿಸಿ ಎಸ್ಟಿ ಮೀಸಲಾತಿ ಕೊಡಿಸಲಿ. ಇಲ್ಲದಿದ್ದರೆ ರಾಜೀನಾಮೆ ನೀಡಲಿ ಎಂದರು.
ಕಾಗಿನೆಲೆ ತಿಂಥಣಿ ಕನಕ ಗುರು ಪೀಠದ ಸಿದ್ದರಾಮನಂದ ಪುರಿ ಸ್ವಾಮೀಜಿ ಮಾತನಾಡಿ, ಹಾಲುಮತ ಉತ್ಸವ ಒಂದು ಸಾಂಸ್ಕೃತಿಕ ಉತ್ಸವವಾಗಿದೆ. ಕುರುಬ ಸಮಾಜದ ಕಂಬಳಿ, ಭಂಡಾರ ಜಾತಿಯ ಪ್ರತೀಕವಲ್ಲ. ಮುಂದಿನ ತಲೆಮಾರಿಗೆ ನಮ್ಮ ಸಂಸ್ಕೃತಿ ಪರಿಚಯಿಸುವ ಉದ್ದೇಶದಿಂದ ಹಾಲುಮತ ಉತ್ಸವ ಆಚರಿಸಲಾಗುತ್ತಿದೆ ಎಂದರು.