ರಾಯಚೂರು: ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಎದುರಾಗಲಿದೆ. ರಾಷ್ಟ್ರೀಯ ಪಕ್ಷಗಳೆರಡು ಮಸ್ಕಿ ಕ್ಷೇತ್ರದ ಚುನಾವಣೆಯನ್ನ ಗಂಭೀರವಾಗಿ ಪರಿಗಣಿಸಿವೆ. ಬೈ ಎಲೆಕ್ಷನ್ ಮುನ್ನವೇ ಕ್ಷೇತ್ರದಲ್ಲಿ ನೇರ ಹಣಾಹಣಿ ಏರ್ಪಟ್ಟಿದೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಡೆಸಿದ ಅಪರೇಷನ್ ಕಮಲದಲ್ಲಿ ಮಸ್ಕಿ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದ ಪ್ರತಾಪ್ ಗೌಡ ಪಾಟೀಲ್ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದರು. ಇದಾದ ಬಳಿಕ ಕಾನೂನುತ್ಮಾಕ ಸಮಸ್ಯೆಯಿಂದ ಬೈ ಎಲೆಕ್ಷನ್ ಗೆ ತೊಂದರೆಯಾಗಿತ್ತು. ಇದೀಗ ಕಾನೂನುತ್ಮಾಕ ಸಮಸ್ಯೆ ದೂರವಾಗಿದ್ದು, ಬೈ ಎಲೆಕ್ಷನ್ ಗೆ ಅಖಾಡ ಸಿದ್ಧಗೊಳುತ್ತಿದೆ. ಪರಿಶಿಷ್ಟ ಪಂಗಡ(ಎಸ್ ಟಿ) ಮೀಸಲು ಕ್ಷೇತ್ರವಾಗಿರುವ ಮಸ್ಕಿ ಕ್ಷೇತ್ರ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಇದೀಗ ಮತ್ತೆ ಉಪಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯ ಪೈಪೋಟಿ ನಡೆಯಲಿದೆ. ಆದರೆ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಈ ಬಾರಿ ಬೈ ಎಲೆಕ್ಷನ್ ಕಣಕ್ಕಿಳಿಯಲಿದ್ದು, ಇಬ್ಬರು ಅಭ್ಯರ್ಥಿಗಳು ಪಕ್ಷವನ್ನ ಬದಲಾಯಿಸಿದ್ದಾರೆ.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಬಸವನಗೌಡ ತುರವಿಹಾಳ, ಕಾಂಗ್ರೆಸ್ ನಿಂದ ಪ್ರತಾಪ್ ಗೌಡ ಪಾಟೀಲ್ ಮಧ್ಯ ಭಾರಿ ಜಿದ್ದಾಜಿದ್ದಿ ನಡೆದು, ಬಿಜೆಪಿ ಅಭ್ಯರ್ಥಿಯಾಗಿದ್ದ ಬಸವನಗೌಡ ತುರವಿಹಾಳ 213 ಮತಗಳಿಂದ ಪ್ರತಾಪ್ ಗೌಡ ವಿರುದ್ಧ ಸೋಲು ಅನುಭವಿಸಿದ್ದರು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಪ್ರತಾಪ್ ಗೌಡ ಪಾಟೀಲ್ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇದಾದ ಬಳಿಕ ಬೈ ಎಲೆಕ್ಷನ್ ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸವನಗೌಡ ತುರುವಿಹಾಳ ಪ್ರಬಲ ಆಕಾಂಕ್ಷಿಯಾಗಿದ್ದರು. ಬಿಜೆಪಿ ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣಿಕರ್ತರಾದವರ ಪೈಕಿ ಪ್ರತಾಪ್ ಗೌಡ ಪಾಟೀಲ್ ಕೂಡ ಒಬ್ಬರಾಗಿರುವುದರಿಂದ ಬಿಜೆಪಿಯಿಂದ ಪ್ರತಾಪ್ಗೌಡ ಪಾಟೀಲ್ಗೆ ಟಿಕೆಟ್ ಖಾತರಿಯಾಗಿದೆ. ಇದರಿಂದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಪ್ರಬಲ ಆಕಾಂಕ್ಷಿಯಾಗಿದ್ದ ಬಸವನಗೌಡ ತುರುವಿಹಾಳಗೆ ನಿರಾಸೆ ಉಂಟಾಗಿದೆ.
ಇದೀಗ ಬಸವನಗೌಡ ತುರವಿಹಾಳ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಮಸ್ಕಿ ಉಪಚುನಾವಣೆ ಕದನಕ್ಕೆ ಕಾಂಗ್ರೆಸ್ ನಿಂದ ಸ್ಪರ್ಧೆ ಬಹುತೇಕ ಖಚಿತವಾಗಿದ್ದು, ಹೀಗಾಗಿ ಬೈ ಎಲೆಕ್ಷನ್ ಘೋಷಣೆ ಮುನ್ನವೇ ಮಸ್ಕಿ ಕ್ಷೇತ್ರದ ಚುನಾವಣಾ ಅಖಾಡ ರಂಗೇರಿದೆ. ಮುಂಬರುವ ದಿನಗಳಲ್ಲಿ ಚುನಾವಣೆ ದಿನಾಂಕ ಘೋಷಣೆಯಾದರೆ ಕ್ಷೇತ್ರದಲ್ಲಿ ಚುನಾವಣೆ ಕಾವು ಮತ್ತಷ್ಟು ಜೋರಾಗಲಿದೆ. ಒಟ್ಟಿನಲ್ಲಿ ಬರುವ ದಿನಗಳಲ್ಲಿ ಮಸ್ಕಿ ಉಪಕದನಲ್ಲಿ ಕಳೆದ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಸ್ಪರ್ಧೆಗೆ ಇಳಿಯಲಿದ್ದು, ಅಭ್ಯರ್ಥಿಗಳು ಪಕ್ಷಗಳ ಮಾತ್ರ ಅದಲು-ಬದಲು ಆಗಿವೆ.