ಲಿಂಗಸುಗೂರು: ನಾರಾಯಣಪುರ ಮುಖ್ಯ ರಸ್ತೆಯ ಈಚನಾಳ ಕ್ರಾಸ್ವರೆಗೆ ಗ್ರಾಮಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಯು ಜಲಾವೃತಗೊಂಡು ಮೂರು ತಿಂಗಳಲ್ಲಿ ಬೃಹತ್ ಗುಂಡಿಗಳು ನಿರ್ಮಾಣಗೊಂಡಿವೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿದೆ.
ಈ ಕುರಿತು ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲವಂತೆ. ಚುನಾಯಿತ ಪ್ರತಿನಿಧಿಗಳು ಇತ್ತ ಗಮನ ಹರಿಸುತ್ತಿಲ್ಲ. ಈಚನಾಳ ಅಲ್ಲದೆ ತೊರಲಬಂಚಿ, ನೀರಲಕೇರಿ ಗ್ರಾಮ ಸೇರಿದಂತೆ ಇತರೆ ಗ್ರಾಮಗಳಿಗೆ ತೆರಳಲು ಇದೇ ಮುಖ್ಯ ರಸ್ತೆಯಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಸಂಬಂಧಿಸಿದ ಅಧಿಕಾರಿಗಳು ರಸ್ತೆಯ ಶಾಶ್ವತ ದುರಸ್ತಿಗೆ ಮುಂದಾಗಬೇಕು. ಇಲ್ಲವಾದಲ್ಲಿ ಗ್ರಾಮಸ್ಥರು ಸೇರಿಕೊಂಡು ತಹಶೀಲ್ದಾರ್ ಕಚೇರಿ ಆವರಣದಲ್ಲಿ ಧರಣಿ ನಡೆಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.