ರಾಯಚೂರು: ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನಾಂಕ ಘೋಷಣೆಯಾಗಿಲ್ಲ. ಆಗಲೇ ಮಸ್ಕಿ ಬೈ ಎಲೆಕ್ಷನ್ ಫಿವರ್ ಶುರುವಾಗುವ ಮೂಲಕ ರಾಜ್ಯ ರಾಜಕೀಯದಲ್ಲಿ ಗಮನ ಸೆಳೆಯುತ್ತಿದೆ. ಬರುವ ಉಪಚುನಾವಣೆಯನ್ನ ಬಿಜೆಪಿಯ ಯುವ ಚಾಣಕ್ಯ ಎಂದು ಬಿಂಬಿತವಾಗುತ್ತಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಸಾರಥ್ಯವನ್ನ ವಹಿಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಇತ್ತೀಚೆಗೆ ನಡೆದ ಎರಡು ಉಪಚುನಾವಣೆ ಫಲಿತಾಂಶ ಬಂದ ಬಳಿಕ, ಮತ್ತೆರಡು ವಿಧಾಸಭಾ ಕ್ಷೇತ್ರದ ಉಪಚುನಾವಣೆ ಮುಂಬರುವ ದಿನಗಳಲ್ಲಿ ನಡೆಯಲಿದೆ. ಇದಕ್ಕಾಗಿ ಎರಡು ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಬಿಜೆಪಿಯಲ್ಲಿ ಯೂತ್ ಐಕಾನ್ ಆಗಿ ಗುರುತಿಸಿಕೊಳ್ಳುತ್ತಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ, ವಿಜಜೇಂದ್ರ ಮಸ್ಕಿ ವಿಧಾನಸಭಾ ಕ್ಷೇತ್ರದ ಸಾರಥ್ಯವನ್ನ ವಹಿಸಿಕೊಳ್ಳಬೇಕು ಎನ್ನುವ ಒತ್ತಾಯವನ್ನ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹಾಗೂ ಅವರ ಬೆಂಬಲಿಗರು ಮಾಡಿದ್ದಾರೆ ಎನ್ನಲಾಗ್ತಿದೆ.
ಉಪಚುನಾವಣೆ ಕದನದಲ್ಲಿ ಎರಡು ಕ್ಷೇತ್ರಗಳನ್ನು ತನ್ನ ವಶಕ್ಕೆ ಪಡೆದಿಕೊಂಡಿರುವ ಜೋಶ್ನಲ್ಲಿರುವ ಬಿಜೆಪಿ, ಮಸ್ಕಿ ಕ್ಷೇತ್ರವನ್ನ ತಮ್ಮದಾಗಿಸಿಕೊಳ್ಳಬೇಕು ಎನ್ನುವ ತವಕದಲ್ಲಿದೆ. ಇದಕ್ಕೆ ಪ್ರತಿತಂತ್ರವಾಗಿ ಕಾಂಗ್ರೆಸ್ ಸಹ ರಣತಂತ್ರವನ್ನ ರೂಪಿಸಿರುವುದು ಬಿಜೆಪಿಗೆ ಸವಾಲಾಗಿದೆ. ಮಸ್ಕಿ ಉಪಚುನಾವಣೆಯನ್ನ ವಿಜಯೇಂದ್ರ ಅವರ ಸಾರಥ್ಯದಲ್ಲಿ ನಡೆಸಬೇಕು ಎಂದು ಯಡಿಯೂರಪ್ಪಗೆ ಮನವಿ ಮಾಡುವ ಮೂಲಕ ಒತ್ತಡ ಹೇರಲಾಗಿದೆ ಎನ್ನಲಾಗ್ತಿದ್ದು, ಕಲ್ಯಾಣ ಕರ್ನಾಟಕದ ಭಾಗಕ್ಕೆ ವಿಜಯೇಂದ್ರ ಬರುತ್ತಾರಾ ಎನ್ನುವುದು ಚರ್ಚೆಯಾಗ್ತಿದೆ.
ಈಗಾಗಲೇ ಪ್ರತಾಪ್ ಗೌಡ ಪಾಟೀಲ್ ಮತ್ತು ಅವರ ಬೆಂಬಲಿಗರು ಬೆಂಗಳೂರಿನಲ್ಲಿ ವಿಜಯೇಂದ್ರರನ್ನ ಭೇಟಿ ಮಾಡಿ ಕ್ಷೇತ್ರದ ರಾಜಕೀಯ ಚಿತ್ರಣ, ಬೆಳವಣಿಗೆಯನ್ನ ತಿಳಿಸುವ ಮೂಲಕ ಚರ್ಚೆ ನಡೆಸಿದ್ದಾರೆ. ಹೀಗಾಗಿ ಪ್ರತಾಪಗೌಡ ಪಾಟೀಲ್ ಒತ್ತಾಯದಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಪುತ್ರ ವಿಜಯೇಂದ್ರರನ್ನು ಮಸ್ಕಿ ಬೈ ಎಲೆಕ್ಷನ್ ಕದನದ ಜವಾಬ್ದಾರಿ ವಹಿಸಿ, ಸಾರಥ್ಯ ನೀಡುತ್ತಾರಯೇ ಎಂಬುದನ್ನು ಕಾದು ನೋಡಬೇಕಾಗಿದೆ.