ರಾಯಚೂರು: ದೇವದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ಕರೆಮ್ಮ ಎಂಬವರ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ಯತ್ನ ನಡೆದಿದೆ ಎಂದು ದಾಮ್ಲಾ ನಾಯಕ ತಾಂಡಾದ ಜೆಡಿಎಸ್ ನಾಯಕಿ ಆರೋಪಿಸಿದರು.
ಕುಟುಂಬಸಮೇತ ಕಟ್ಟೆ ನಾಯ್ಕ ದೇವರ ದರ್ಶನಕ್ಕೆ ಬಂದಿದ್ದಾಗ ಗ್ರಾಮ ಪಂಚಾಯತ್ ಸದಸ್ಯ ವೆಂಕಟೇಶ ಹಾಗು ಮತ್ತೊಬ್ಬ ಮಹಿಳೆ ಸೇರಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅಲ್ಲದೇ ಕಾರಿಗೆ ಕಟ್ಟಲಾಗಿದ್ದ ಜೆಡಿಎಸ್ ಬಾವುಟ ಕಿತ್ತು ಹಾಕಿದ್ದಾರೆ. ಜೆಡಿಎಸ್ ಕಾರ್ಯಕರ್ತರಾದ ರಾಜು, ಶಿವು ಎನ್ನುವವರ ಮೇಲೂ ಹಲ್ಲೆ ನಡೆದಿದೆ. ಕರೆಮ್ಮ ಅವರ ಮಗಳ ಕೈಹಿಡಿದು ಎಳೆದಾಡಿ ಮೊಬೈಲ್ ಕಿತ್ತುಕೊಳ್ಳಲಾಗಿದೆ ಎಂದು ಅವರು ದೂರಿದರು.
ಸಾವಿರಾರು ಬಂಜಾರ ಸಮಾಜದವರು ಸೇರಿ ಸಮಾವೇಶ ನಡೆಸಿರುವುದನ್ನು ಸಹಿಸಲಾಗದೇ ದೌರ್ಜನ್ಯಕ್ಕೆ ಮುಂದಾಗಿದ್ದಾರೆ. ಇದಕ್ಕೆಲ್ಲ ಶಾಸಕ ಕೆ.ಶಿವನಗೌಡ ನಾಯಕರ ಕುಮ್ಮಕ್ಕಿದೆ. ನಮಗೆ ನ್ಯಾಯ ಸಿಗುವವರೆಗೂ ಇಲ್ಲಿಂದ ಹೋಗುವುದಿಲ್ಲ ಎಂದರು.
ಪೊಲೀಸರಿಗೆ ದೂರು: ಜೆಡಿಎಸ್ ಜಿಲ್ಲಾ ಘಟಕಾದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಲಾಗಿದ್ದು, ಹಲ್ಲೆಗೆ ಯತ್ನಿಸಿದವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಲಾಗಿದೆ.
ಇದನ್ನೂ ಓದಿ: ಮೈಸೂರು: ಟ್ರ್ಯಾಕ್ಟರ್ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಸಾವು