ರಾಯಚೂರು: ಎಲ್ಲಾ ಶಾಸಕರು ಮಠಾಧೀಶರು ಹಾಗೂ ದೇವಸ್ಥಾನಗಳಿಗೆ ಭೇಟಿ ನೀಡುವ ಸ್ವಾತಂತ್ರ್ಯವಿದೆ. ಶಾಸಕರಾದ ಅರವಿಂದ ಬೆಲ್ಲದ್, ರಮೇಶ ಜಾರಕಿಹೊಳಿ ದೇವಸ್ಥಾನ ಭೇಟಿ ವಿಚಾರದ ಸಲುವಾಗಿ ಅನಗತ್ಯ ಗೊಂದಲ ಉಂಟು ಮಾಡಬೇಕಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ರಾಯಚೂರಿನಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಬಿಜೆಪಿ ಕಚೇರಿ ಕಟ್ಟಡ ಕಾಮಗಾರಿ ವೀಕ್ಷಣೆ ಮಾಡಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ದೇವಸ್ಥಾನಕ್ಕೆ, ಮಠಗಳಿಗೆ ಹೋಗುವುದು ಅವರ ವೈಯಕ್ತಿಕ ವಿಚಾರ. ಅರವಿಂದ್ ಬೆಲ್ಲದ್ ಹಾಗೂ ಸಿ.ಪಿ.ಯೋಗಿಶ್ವರ್ ವಿವಿಧ ಮಠಗಳಿಗೆ ಭೇಟಿ ನೀಡಿದ್ರೆ ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಫಡ್ನವೀಸ್ ಅವರೊಂದಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿಗೆ ಮಹತ್ವ ನೀಡಬೇಕಿಲ್ಲ. ಫಡ್ನವೀಸ್ ಪಕ್ಷದ ಹಿರಿಯ ನಾಯಕರು. ಅವರೊಂದಿಗಿನ ಭೇಟಿ ಬಗ್ಗೆ ಇಬ್ಬರೂ ನಾಯಕರು ಏನನ್ನೂ ಹೇಳಿಲ್ಲ ಎಂದು ಹೇಳಿದರು.
ಬೆಲ್ಲದ್ ಅವರ ಫೋನ್ ಕದ್ದಾಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಪ್ರಕರಣದ ತನಿಖೆ ನಡೆಯುತ್ತಿದೆ. ಸತ್ಯಾಂಶ ತನಿಖೆ ನಂತರ ಹೊರಬರಲಿದೆ ಎಂದರು. ಹೆಚ್. ವಿಶ್ವನಾಥ್ ಅವರು ಪಕ್ಷಕ್ಕೆ ಇತ್ತೀಚೆಗೆ ಸೇರಿದ್ದಾರೆ. ಅವರು ಪಕ್ಷದ ನಾಯಕತ್ವದ ವಿರುದ್ಧ ಹೇಳಿಕೆ ನೀಡುತ್ತಿರುವುದರ ಬಗ್ಗೆ ಶೀಘ್ರ ಕರೆಸಿ ಮಾತನಾಡುತ್ತೇನೆ ಎಂದು ಕಟೀಲ್ ತಿಳಿಸಿದರು.
ಇದನ್ನೂ ಓದಿ: ಮತ್ತೆ ಆ್ಯಕ್ಟಿವ್ ಆದ ರಮೇಶ್ ಜಾರಕಿಹೊಳಿ: ಸಂಪುಟ ಸೇರಲು ಕಸರತ್ತು!