ರಾಯಚೂರು: "ಪತ್ರಿಕೆಗಳಲ್ಲಿ ಗ್ಯಾರಂಟಿಗಳ ಬಗ್ಗೆ ಜಾಹೀರಾತು ಕೊಟ್ಟ ಮಾತ್ರಕ್ಕೆ ಅವು ಜನರಿಗೆ ತಲುಪಿದೆ ಎಂದರ್ಥವಲ್ಲ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು. ದೇವದುರ್ಗ ತಾಲೂಕಿನ ಕಾಗಿನೆಲೆ ಕನಕಗುರುಪೀಠದಲ್ಲಿ ಇಂದಿನಿಂದ ಹಮ್ಮಿಕೊಂಡಿರುವ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಈಗಾಗಲೇ ಕಾಂಗ್ರೆಸ್ ನವರು ಆತಂಕದಲ್ಲಿ ಇದ್ದಾರೆ. ದೇಶದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಪರವಾದ ಅಲೆ ಇದೆ" ಎಂದು ಹೇಳಿದರು.
"ಹಾಗಾಗಿ ಕಾಂಗ್ರೆಸ್ ಪಕ್ಷ ಹಾಗೂ ಪಕ್ಷದ ಮುಖಂಡರು ಗೊಂದಲದಲ್ಲಿ ಇದ್ದಾರೆ. ಒಂದು ಕಡೆ ಮೂವರನ್ನು ಡಿಸಿಎಂ ಮಾಡಬೇಕು ಎಂದು ಧ್ವನಿ ಎತ್ತಿದ್ದಾರೆ. ಮತ್ತೊಂದು ಕಡೆ ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದೆಲ್ಲವನ್ನು ಜನರು, ಮತದಾರರು ಗಮನಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ. ಜನರು ರಾಜ್ಯ ಸರ್ಕಾರದ ವಿರುದ್ಧ ಶಾಪ ಹಾಕುತ್ತಿದ್ದಾರೆ. ಇವರು ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ, ಮತ್ತೊಂದು ಕಡೆ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ" ಎಂದು ಟೀಸಿದರು.
"ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಜನ, ಬಡವರ, ರೈತರ ವಿರೋಧಿ ಸರ್ಕಾರವಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳ ನಡವಳಿಕೆ ನೋಡಿದರೆ ಇವರು ಅಲ್ಪಸಂಖ್ಯಾತರ ಮತಗಳನಷ್ಟೇ ಪಡೆದುಕೊಂಡು ಅಧಿಕಾರಕ್ಕೆ ಬಂದಿದ್ದಾರಾ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಒಂದು ಕಡೆ ಜ.22ರಂದು ರಾಜ್ಯದ ಮುಜರಾಯಿ ಇಲಾಖೆಯ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಎಂದು ಹೇಳುತ್ತಾರೆ. ಮತ್ತೊಂದು ಕಡೆ ನಮಗೆ ಆಹ್ವಾನ ಬಂದಿಲ್ಲ ಎಂದು ಹೇಳುತ್ತಾರೆ. ಯಾರಿಗೆ ಆಹ್ವಾನ ಬಂದಿದೆ ಅವರು ನಾವು ಹೋಗುವುದಿಲ್ಲ ಎಂದು ತೀರ್ಮಾನ ಮಾಡುತ್ತಾರೆ. ಒಟ್ಟಾರೆ ಕಾಂಗ್ರೆಸ್ ಪಕ್ಷ ದೆಹಲಿಯಿಂದ ಬೆಂಗಳೂರಿನ ವರೆಗೆ ಸಂಪೂರ್ಣ ಗೊಂದಲ ಮಯವಾಗಿದೆ" ಎಂದು ಹೇಳಿದರು.
ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗುವುದನ್ನು ತಡೆಯಲು ಸಾಧ್ಯವಿಲ್ಲ: "ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಾತ್ರಿಯಾಗಿದೆ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಹಾಗಾಗಿ ಹತಾಶರಾಗಿ ಕಾಂಗ್ರೆಸ್ ಪಕ್ಷದವರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ" ಎಂದರು.
ಇದನ್ನೂ ಓದಿ: ರಾಜ್ಯ ಸರ್ಕಾರದ ಕಾನೂನು, ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಬಿಜೆಪಿ ಆಕ್ರೋಶ