ರಾಯಚೂರು: ಸಂಸ್ಕೃತಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪುಣ್ಯ ಪುರುಷರಿಗೆ ಅಪಮಾನ ಮಾಡುವ ಕೆಲಸ ದೇಶದಲ್ಲಿ ಸದ್ಯ ಆಗುತ್ತಿದೆ. ವೀರ ಸಾವರ್ಕರ್ ಅವರ ಕಾಲಿನ ದೂಳಿಗೂ ಸಮನಾಗದವರೂ ಕೂಡ ಇಂದು ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಅಂತಹವರನ್ನೆಲ್ಲ ಕೇವಲ ಒಂದು ವಾರ ಅಂಡಮಾನ್ ನಿಕೋಬಾರ್ ಜೈಲಿಗಟ್ಟಬೇಕು ಎಂದು ವಿಜಯಪುರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಅವರು, ಸ್ವಾಮೀಜಿಗಳಿಗೂ ಮನವಿ ಮಾಡಿದರು.
ರಾಯಚೂರು ನಗರ ವೀರಸಾರ್ವಕರ್ ಸಂಘಟನೆಯ ಗಜಾನನ ಮಂಡಳಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇಶದಲ್ಲಿ ಅಸ್ಪೃಶ್ಯತೆ ತೊಲಗಿಸಲು ದಲಿತರಿಗಾಗಿ ಸಾಮೂಹಿಕ ಭೋಜನ ಹಾಗೂ ದೇವಸ್ಥಾನಗಳ ಪ್ರವೇಶವನ್ನು ವೀರ ಸಾವರ್ಕರ್ ಆರಂಭಿಸಿದ್ದರು. ಸಾವರ್ಕರ್ ತಮ್ಮ ಇಡೀ ಜೀವನವನ್ನೇ ದೇಶಕ್ಕೆ ಮುಡಿಪಾಗಿಟ್ಟವರು ಎಂದರು.
ಬೋಸ್ ಅಥವಾ ಪಟೇಲ್ ಪ್ರಧಾನಿ ಆಗಬೇಕಿತ್ತು: ಜವಾಹರಲಾಲ್ ನೆಹರು ಜೈಲಿಗೆ ಹೋದ ಐದನೇ ದಿನಕ್ಕೆ ತಪ್ಪೊಪ್ಪಿಗೆ ಬರೆದು ಕೊಟ್ಟಿದ್ದರು. ದೇಶದ ಮೊದಲ ಪ್ರಧಾನಿ ಸುಭಾಷ್‌ಚಂದ್ರ ಬೋಸ್ ಅಥವಾ ಸರ್ದಾರ್ ವಲ್ಲಭಭಾಯಿ ಪಟೇಲ್ ಆಗಬೇಕಾಗಿತ್ತು. ಆದರೆ ಆಗಿನ ಸಂದರ್ಭದಲ್ಲಿ ನೆಹರು ಪ್ರಧಾನಿಯಾದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಮ್ಮು ಕಾಶ್ಮೀರಕ್ಕೆ 370 ಕಾನೂನಿಗೆ ಡಾ.ಬಿ.ಆರ್.ಅಂಬೇಡ್ಕರ್ ವಿರೋಧವಿತ್ತು. ಆದರೆ ಅವರ ಅಭಿಪ್ರಾಯದ ವಿರುದ್ಧವಾಗಿ ಶೇಕ್ ಅಬ್ದುಲ್ಲಾ ಸಲುವಾಗಿ ಜಮ್ಮು ಕಾಶ್ಮೀರಕ್ಕೆ 370 ಕಾನೂನು ಜಾರಿ ಮಾಡಲಾಗಿತ್ತು. ದೇಶ ವಿಭಜನೆಯನ್ನು ಅಂಬೇಡ್ಕರ್ ವಿರೋಧಿಸಿದ್ದರು. ಒಂದು ವೇಳೆ ದೇಶ ವಿಭಜನೆ ಮಾಡುವುದಾದರೆ ಇಲ್ಲಿರುವ ಮುಸ್ಲಿಮರನ್ನು ಪಾಕ್ಗೆ, ಪಾಕ್ನಲ್ಲಿರುವ ಹಿಂದೂಗಳನ್ನು ಭಾರತಕ್ಕೆ ಕರೆತರುವಂತೆ ಸಲಹೆ ನೀಡಿದ್ದರು ಎಂದು ಯತ್ನಾಳ್ ಇತಿಹಾಸ ವಿವರಿಸಿದರು.
ಸುಭಾಷ್‌ಚಂದ್ರ ಬೋಸ್ರ ಬಂದೂಕಿನ ದಾಳಿಯಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಅಂಬೇಡ್ಕರ್ ಅವರಿಗೆ ಮುಸ್ಲಿಂ ಧರ್ಮ ಸೇರುವಂತೆ ಹೈದರಾಬಾದ್ ನಿಜಾಮ ಆಹ್ವಾನ ನೀಡಿದ್ದರು. ಆದ್ರೆ ಅವರು ಅಸ್ಪೃಶ್ಯತೆ ವಿರುದ್ಧವಾಗಿ ಬೌದ್ಧ ಧರ್ಮ ಸ್ವೀಕರಿಸಿದರು ಎಂದರು.
ಸನಾತನ ಧರ್ಮ ಉಳಿದರೆ ಮಾತ್ರ ಸಂವಿಧಾನದ ಉಳಿವು: ಸನಾತನ ಧರ್ಮ ಭಗವಂತನಿಂದ ನಿರ್ಮಾಣವಾಗಿದೆ. ಒಬ್ಬ ಮುಖ್ಯಮಂತ್ರಿಯ ಮಗ ಸನಾತನ ಧರ್ಮ ನಾಶದ ಬಗ್ಗೆ ಮಾತಾಡ್ತಾರೆ. ಧರ್ಮ ನಾಶ ಮಾಡುವವರ ಬಗ್ಗೆ ಸ್ವಾಮೀಜಿಗಳು ಮಾತನಾಡಬೇಕು. ಸನಾತನ ಧರ್ಮದ ವಿರುದ್ಧ ಹೇಳಿಕೆ ಕೊಡುವವರಿಗೆ ಎಚ್ಚರಿಕೆ ಕೊಡಬೇಕು. ಧರ್ಮ ಉಳಿದರೆ ಮಾತ್ರ ನಾವು ಉಳಿಯುತ್ತೇವೆ. ಸನಾತನ ಧರ್ಮ ಉಳಿದರೆ ಮಾತ್ರ ಸಂವಿಧಾನ ಉಳಿಯುತ್ತೆ ಎಂದು ಹೇಳಿದರು.
ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಒಟ್ಟುಗೂಡಿಸಲು ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ಗಣೇಶ ಹಬ್ಬ ಆಚರಣೆ ಆರಂಭಿಸಿದ್ದರು. ಆದ್ರೆ ಇಂದು ಗಣೇಶ ಹಬ್ಬ ಆಚರಿಸಲು ಪರವಾನಗಿ ಪಡೆಯಬೇಕಾದ ದುಸ್ಥಿತಿ ಇದೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ 135 ಜನ ಶಾಸಕರಿದ್ದರೂ ಆಡಳಿತ ನಡೆಸೋದಕ್ಕೆ ಬಿಜೆಪಿ ಶಾಸಕರೇ ಬೆಕಾಗಿದ್ದಾರೆ: ಶಾಸಕ ಯತ್ನಾಳ್