ಲಿಂಗಸುಗೂರು : ವಂದಲಿ ಕ್ರಾಸ್ನಿಂದ ಹಟ್ಟಿ ಚಿನ್ನದ ಗಣಿ ಮುಖ್ಯ ರಸ್ತೆ ಅಭಿವೃದ್ಧಿ ಭೂಮಿ ಪೂಜೆಗೆ ಬಿಜೆಪಿ ಕಾರ್ಯಕರ್ತರ ವಿರೋಧದ ಮಧ್ಯೆಯೂ ಶಾಸಕ ಡಿ ಎಸ್ ಹೂಲಗೇರಿ ಭೂಮಿ ಪೂಜೆ ನೆರವೇರಿಸಿದ್ದಾರೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕು ವಂದಲಿ ಕ್ರಾಸ್ನಲ್ಲಿ ಭಾನುವಾರ ಶಾಸಕರ ನೇತೃತ್ವದ ತಂಡ ರೂ. 8.40ಕೋಟಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲು ಹೋದಾಗ ಬಿಜೆಪಿ ಮುಖಂಡರು ನಮ್ಮ ನಾಯಕ ಮಾನಪ್ಪ ವಜ್ಜಲ ಬಂದರೆ ಮಾತ್ರ ಪೂಜೆ ನಡೆಸಿ ಎಂದು ತಕರಾರು ತೆಗೆದರು.
ಬಿಜೆಪಿ ಮುಖಂಡ ಶಂಕರಗೌಡ ಬಳಗಾನೂರ ನೇತೃತ್ವದಲ್ಲಿ ಶಾಸಕರು ಮತ್ತು ಹಿಂಬಾಲಕರ ಮಧ್ಯೆ ವಾಗ್ವಾದ ತಾರಕಕ್ಕೇರಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತ್ತು. ವಜ್ಜಲರೆ ಅನುದಾನ ಕೊಡಿಸಿದ್ದು ಎಂದು ಹೇಳುದಾಗ ಕಾರ್ಯಕರ್ತರ ಮಧ್ಯೆ ನೂಕು ನುಗ್ಗಲು ನಡೆದು ಪೂಜಾ ಸಾಮಗ್ರಿ ಎಸೆದಾಡಿದ ದೃಶ್ಯ ಕಂಡು ಬಂತು.
ಶಾಸಕ ಹೂಲಗೇರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ. ನಮಗೂ ರಾಜಕೀಯ ಗೊತ್ತಿದೆ. ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಮಕ್ಕಳ ಹಿತ ಕಾಪಾಡದ ವಜ್ಜಲ ಹಟ್ಟಿ ಜನರ ಹಿತ ಕಾಯಲು ಸಾಧ್ಯವೇ ಎಂದು ಟೀಕಿಸಿದರು.
ಮಾತಿಗೊಮ್ಮೆ ಶಾಸಕರು ಕಮಿಷನ್ ಏಜೆಂಟರು ಎಂದು ಆರೋಪಿಸುತ್ತಾ ಹೊರಟಿದ್ದಾರೆ. ತಮ್ಮದೇ ಕಂಪನಿ ರೂ. 1400 ಕೋಟಿ ವಿತರಣಾ ನಾಲೆಗಳ ಕಾಮಗಾರಿಯನ್ನು ರಾತ್ರೋ ರಾತ್ರಿ ನಡೆಸಿದೆ. ಅದರ ಪೂಜೆಗೂ ಕರೆದಿಲ್ಲ. ಆ ಕಾಮಗಾರಿಗೆ ಎಷ್ಟು ಕಮಿಷನ್ ನೀಡಿದ್ದಾನೆ ಎಂದು ಆಕ್ರೋಶ ಭರಿತರಾಗಿ ಪ್ರಶ್ನಿಸಿದ್ರು.
ಕೆಸರು ಎರಚಾಟ : ಬಲದಂಡೆ ನಾಲೆ, ನಂದವಾಡಗಿ ಏತ ನೀರಾವರಿ ಯೋಜನೆ ಕಾಮಗಾರಿ ಹೆಸರಲ್ಲಿ ವಜ್ಜಲ ಸಹೋದರರು ಹಗಲು ದರೋಡೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದರು.
ಶಾಸಕ ಹೊಲಗೇರಿ ಯಾವುದೇ ಅನುದಾನ ಬಿಡುಗಡೆ ಮಾಡಿಸಿಲ್ಲ. ವಜ್ಜಲರು ಬಿಡುಗಡೆ ಮಾಡಿಸಿದ ಅನುದಾನಕ್ಕೆ ಭೂಮಿ ಪೂಜೆ ಮಾಡುತ್ತಿದ್ದಾರೆ. ವಜ್ಜಲ ಅವರನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸಬೇಕು ಎಂದು ವಾಗ್ವಾದ ನಡೆಸಿದ್ದು, ರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾಗಿತ್ತು.