ಲಿಂಗಸುಗೂರು: ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳ ಜಾಗೃತಿ ಅಭಿಯಾನವನ್ನು ಮಾಜಿ ಶಾಸಕ ಮಾನಪ್ಪ ವಜ್ಜಲ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಆರು ವರ್ಷದಿಂದ ಕೇಂದ್ರದಲ್ಲಿ ನರೇಂದ್ರ ಮೋದಿ ಆಡಳಿತ ನಡೆಸಲು ಮತದಾರರೇ ಕಾರಣ. ಪ್ರಧಾನಿ ಚುನಾವಣೆಯಲ್ಲಿ ನೀಡಿದ ಭರವಸೆಗಳಲ್ಲಿ ಬಹುತೇಕವನ್ನು ಈಡೇರಿಸಿದ್ದಾರೆ ಎಂದು ಕರಪತ್ರ ನೀಡಿ ವಿವರಿಸಿದರು. ದೇಶ ಕಂಡರಿಯದ ಯೋಜನೆಗಳು, ಕಾಶ್ಮೀರದ ಸಮಸ್ಯೆ ಸೇರಿದಂತೆ ವಿಶ್ವದಾದ್ಯಂತ ಭಾರತದ ಘನತೆ ಗೌರವ ಹೆಚ್ಚಿಸಿದ್ದಾರೆ. ಪ್ರಸಕ್ತ ಅವಧಿಯ ಒಂದು ವರ್ಷ ಸಾಧನೆ ತಿಳಿಸಲು ನಾವು ಮನೆ ಮನೆಗೆ ಬರುತ್ತಿದ್ದು ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು.
ಮೋದಿ ಅವರ ಸರ್ಕಾರದ ಸಾಧನೆಗಳನ್ನು ಓದಿಕೊಂಡು ಕೊರೊನಾ ಹರಡದಂತೆ ನೀಡಿರುವ ಸಲಹೆಗಳನ್ನು ಅನುಸರಿಸಿರಿ. ಕೋವಿಡ್-19 ಮುಕ್ತ ದೇಶವನ್ನಾಗಿ ಮಾಡಲು ನಾವುಗಳು ಲಾಕ್ಡೌನ್ ನಿಯಮ ಪಾಲಿಸೋಣ ಎಂದು ಜನರಲ್ಲಿ ಅವರು ಮನವಿ ಮಾಡಿದರು.