ಲಿಂಗಸುಗೂರು: ಜಿಲ್ಲೆಯಾದ್ಯಂತ ಕೊರೊನಾ ಪ್ರಕರಣಗಳಿಗೆ ಸಂಬಂಧಿಸಿ ಆಯಾ ತಾಲೂಕು ಕೇಂದ್ರಗಳಲ್ಲಿಯೇ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಲಕ್ಷ್ಮಿಕಾಂತರೆಡ್ಡಿ ತಿಳಿಸಿದ್ದಾರೆ.
ಶುಕ್ರವಾರ ಲಿಂಗಸುಗೂರಿಗೆ ಭೇಟಿ ನೀಡಿದ್ದ ಅವರು, ಭವಿಷ್ಯದಲ್ಲಿ ಕೊರೊನಾ ಲಕ್ಷಣಗಳಿಗೆ ಸಂಬಂಧಿಸಿ ಸ್ಥಳೀಯವಾಗಿ ಪರೀಕ್ಷಿಸಲು ಫೀವರ್ ಕ್ಲಿನಿಕ್, ಐಸೋಲೇಷನ್ ವಾರ್ಡ್, ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಿ, ಅನ್ಯ ಜಿಲ್ಲೆ, ರಾಜ್ಯ, ವಿದೇಶಗಳಿಂದ ಬರುವವರಿಗೆ ಸ್ಥಳೀಯವಾಗಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗುವುದು ಎಂದರು.
ಗ್ರಾಮೀಣ ಪ್ರದೇಶಕ್ಕೆ ವಾಪಸಾದ ಕೂಲಿ ಕಾರ್ಮಿಕರಿಗೆ ಪಡಿತರ ನೀಡಲಾಗುತ್ತಿದೆ. ಪಡಿತರ ಕಾರ್ಡ್ ಹೊಂದಿರದ ಕಾರ್ಮಿಕರಿಗೆ ದಾನಿಗಳ ನೆರವು ಪಡೆದು ಪಡಿತರ ಹಂಚಿಕೆ ಮಾಡಲಾಗುವುದು ಎಂದರು.
ಪರಿಶೀಲನೆ: ಸಾರ್ವಜನಿಕ ಆಸ್ಪತ್ರೆಯ ಐಸೋಲೇಷನ್ ವಾರ್ಡ್, ಫೀವರ್ ಕ್ಲಿನಿಕ್, ಕ್ವಾರಂಟೈನ್ ಕಲ್ಪಿಸುವ ಹಾಗೂ ನಿರ್ಗತಿಕರಿಗೆ ವ್ಯವಸ್ಥೆ ಕಲ್ಪಿಸಲು ನಿಯೋಜನೆ ಮಾಡಿದ ವಸತಿ ನಿಲಯಗಳಿಗೆ ಸಿಇಒ ಲಕ್ಷ್ಮಿಕಾಂತರೆಡ್ಡಿ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.