ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಸುಕ್ಷೇತ್ರ ಅಮರೇಶ್ವರ ದೇವಾಲಯ ಹತ್ತಿರದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ದೇಹದ ಬೆಲೆಬಾಳುವ ಭಾಗಗಳನ್ನು ಮಾರುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ.
ಆನೆಯ ದಂತ, ಹುಲಿಯ ಉಗುರು, ಕಸ್ತೂರಿ ಮೃಗದ ಕೂದಲು ನಾನಾ ಬಗೆಯ ವನ್ಯಜೀವಿಗಳ ದೇಹದ ಭಾಗಗಳನ್ನು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಆಧರಿಸಿ ತನಿಖೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, 1 ಕೋಟಿ 29 ಲಕ್ಷ ಮೌಲ್ಯದ ವಿವಿಧ ಪ್ರಾಣಿಗಳ ಭಾಗಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ಹಟ್ಟಿ ಮೂಲದ ಆದಪ್ಪ, ಕಲಬುರಗಿ ಮೂಲದ ಅಬ್ದುಲ್ ಆಫೀಟ್, ಶಿವಮೊಗ್ಗದ ಹಕ್ಕಿಪಿಕ್ಕಿ ಕ್ಯಾಂಪಿನ ಅಜಯ್ ದೇವಗನ್, ಕರಡಕಲ್ ಗ್ರಾಮದ ಪೂಜಾರಿ ಗಂಗಾಧರಯ್ಯ ಎಂದು ಗುರುತಿಸಲಾಗಿದೆ.
ಆರೋಪಿಗಳನ್ನು ಸೆರೆ ಹಿಡಿಯಲು ಪೊಲೀಸರು ತೆರಳಿದ್ದಾಗ ಪರಾರಿಯಾಗಲು ಯತ್ನಿಸಿದ್ದರು. ಲಿಂಗಸೂಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.