ರಾಯಚೂರು: ಪ್ರಯಾಣಿಕರಿಗೆ ಹೊರೆ ತಪ್ಪಿಸುವ ಉದ್ದೇಶದಿಂದ ಸಾರಿಗೆ ಇಲಾಖೆ ಜಾರಿಗೆ ತಂದಿರುವ ಆಟೋಗಳಲ್ಲಿ ಮೀಟರ್ ಅಳವಡಿಕೆ ನಿಯಮವನ್ನು ಜಿಲ್ಲೆಯಲ್ಲಿ ಆಟೋ ಚಾಲಕರು ಗಾಳಿಗೆ ತೂರಿದ್ದಾರೆ. ಹೀಗಾಗಿ, ಪ್ರಯಾಣಿಕರು ದುಬಾರಿ ದರ ತೆತ್ತು ಪ್ರಯಾಣಿಸಬೇಕಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಮಹಾನಗರ, ನಗರ ಪ್ರದೇಶಗಳಲ್ಲಿ ಕೆಲ ಆಟೋ ಚಾಲಕರು ಮೀಟರ್ ಅಳವಡಿಸಿದರೆ, ಕೆಲವರು ಅದರಿಂದ ದೂರವಿದ್ದಾರೆ. ಜಿಲ್ಲೆಯಲ್ಲಿ ಸಾವಿರಾರು ಆಟೋಗಳಿವೆ. ನಗರದಲ್ಲಿ ಸಾವಿರಾರು ಆಟೋಗಳಲ್ಲಿ ಅರ್ಧದಷ್ಟು ಮೀಟರ್ ಅಳವಡಿಸಿಲ್ಲ. ಅಲ್ಲದೇ, ರಾತ್ರಿ ಸಮಯದಲ್ಲಿ ದುಬಾರಿ ಬಾಡಿಗೆ ನೀಡುವಂತೆ ಚಾಲಕರು ಪೀಡಿಸುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ.
ಇದನ್ನೂ ಓದಿ...ಲಾಕ್ಡೌನ್ ಮಧ್ಯೆಯೂ ಮಹಾನಗರ ಪಾಲಿಕೆಗೆ ಹರಿದು ಬಂದ ಆಸ್ತಿ ತೆರಿಗೆ..
2020ರ ಮಾ.3ರವರೆಗೆ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಜಿಲ್ಲೆಯಲ್ಲಿ 1,082 ಆಟೋಗಳಿಗೆ ಪರ್ಮಿಟ್ ನೀಡಲಾಗಿದೆ. ಆದರೆ, ಜಿಲ್ಲೆಯಲ್ಲಿ ಅದಕ್ಕೂ ಅಧಿಕ ಆಟೋಗಳಿವೆ. ಅವುಗಳಲ್ಲಿ ಉಳಿದವು ವಾಹನಗಳು ಅನಧಿಕೃತವಾಗಿ ಸಂಚರಿಸುತ್ತಿವೆ. ಕೆಲವರು ಕಾಯಂ ಸ್ಥಳಗಳಿಗೆ ಇಂತಿಷ್ಟು ದರ ಎಂದು ನಿಗದಿ ಮಾಡಿದ್ದರೆ, ಕೆಲ ಚಾಲಕರು ದುಪ್ಪಟ್ಟು ವಸೂಲಿ ಮಾಡುತ್ತಿದ್ದಾರೆ.
ಆಟೋಗಳಿಗೆ ಮೀಟರ್ ಅಳವಡಿಕೆ ಸಮರ್ಪಕವಾಗಿ ಜಾರಿಗೆಯಾಗದ ಕುರಿತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳನ್ನು ವಿಚಾರಿಸಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲ. ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇವೆ ಎಂದು ಜಾರಿಕೊಳ್ಳುತ್ತಿದ್ದಾರೆ. ಮೀಟರ್ ಅಳವಡಿಸದ ಆಟೋಗಳ ವಿರುದ್ಧ ಕ್ರಮ ಕೈಗೊಂಡು ದುಪ್ಪಟ್ಟು ವಸೂಲಿಗೆ ಕಡಿವಾಣ ಹಾಕಬೇಕಿದೆ ಎಂದು ಜನರು ಒತ್ತಾಯಿಸುತ್ತಿದ್ದಾರೆ.