ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನಲ್ಲಿ ಅಪರಿಚಿತ ವ್ಯಕ್ತಿಯ ದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೌಡೂರು ಗ್ರಾಮದ ಹೊರವಲಯದ ಗೌಡೂರು-ಗುರುಗುಂಟಾ ರಸ್ತೆಯ ಕಾಲುವೆ ಬಳಿ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಗೆ ಸುಮಾರು 40 ವರ್ಷ ವಯಸ್ಸಾಗಿರಬಹುದೆಂದು ಆಂದಾಜಿಸಲಾಗಿದೆ. ಕೊಲೆ ಮಾಡಿ ಗೋಣಿ ಚೀಲದಲ್ಲಿ ಕಟ್ಟಿ ಹಾಕಿ, ಸುಟ್ಟು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮೃತ ವ್ಯಕ್ತಿ ಯಾರೆಂಬುದರ ಬಗ್ಗೆ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬಿಳಿ ಗಡ್ಡ, ಬಿಳಿ ಕೂದಲು ಮತ್ತು ಅರ್ಧ ಬೋಳು ತಲೆಯಿದ್ದ ಯಾರಾದರೂ ಕಾಣೆಯಾಗಿದ್ದರೆ ಹಟ್ಟಿ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.