ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ಬರುವ ಅಂಬಿಕಾನಗರ ಸರ್ವೇ ನಂಬರ್ 508 ಬ 1, 2, 3 ಜಾಗದಲ್ಲಿ ಎರಡು ಎಕರೆ ಉದ್ಯಾನವನಕ್ಕಾಗಿ ಖಾಲಿ ಬಿಟ್ಟ ಸ್ಥಳದಲ್ಲಿ ಅಕ್ರಮವಾಗಿ ಅಂಬಾ ಭವಾನಿ ದೇವಸ್ಥಾನವನ್ನು ಕಟ್ಟಿದ್ದು, ಇದಕ್ಕೆ ಪುರಸಭೆ ಅಧಿಕಾರಿಗಳು, ಅಧ್ಯಕ್ಷರು ಸಹಕಾರ ನೀಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಅಳ್ಳಪ್ಪ ದೂರು ನೀಡಿದ್ದಾರೆ.
ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಉದ್ಯಾನವನಕ್ಕೆ ಬಿಟ್ಟ ಸ್ಥಳದಲ್ಲಿ ಮಂದಿರ, ಮಸೀದಿ, ಚರ್ಚ್ ಹಾಗೂ ಇತರೆ ಯಾವುದೇ ಧಾರ್ಮಿಕ ಕಟ್ಟಡ ಕಟ್ಟಬಾರದು ಎಂಬ ಆದೇಶವಿದೆ. ಆದ್ರೂ ಸಾರ್ವಜನಿಕ ಜಾಗ ಮರಾಠ ಸಮುದಾಯಕ್ಕೆ ನೀಡಿ ಅಂಬಾ ಭವಾನಿ ದೇವಸ್ಥಾನ ನಿರ್ಮಿಸಿದ್ದಾರೆ. ಸಾಕಷ್ಟು ದೂರಗಳ ನಂತರ 2010 ಅಕ್ಟೋಬರ್ 20ರಂದು ದೇವದುರ್ಗ ಪುರಸಭೆಯಲ್ಲಿ ಕರೆದ ತುರ್ತು ಸಭೆಯಲ್ಲಿ ಅಕ್ರಮವಾಗಿ ಕಟ್ಟಿರುವ ಕಟ್ಟಡವನ್ನು ನೆಲಸಮ ಮಾಡುತ್ತೇವೆ ಎಂದು ತೀರ್ಮಾನಿಸಲಾಗಿತ್ತು. ಆದರೆ ಇದುವರೆಗೂ ಇದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಜಿಲ್ಲಾಡಳಿತ ಕ್ಷತ್ರೀಯ ಸಮಾಜದಿಂದ ನಿರ್ಮಿಸಲ್ಪಟ್ಟ ಅಂಬಾ ಭವಾನಿ ದೇವಸ್ಥಾನದ ಹಕ್ಕುಪತ್ರಗಳನ್ನು ವಶಕ್ಕೆ ಪಡೆದು ಸರ್ಕಾರದ ಅಧೀನಕ್ಕೆ ಒಳಪಡಿಸಬೇಕು. ಇಲ್ಲದೆ ಹೋದಲ್ಲಿ ಹೈಕೋರ್ಟ್ನಲ್ಲಿ ದಾವೆ ಹೂಡಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.