ರಾಯಚೂರು : ವಿಧಾನಸಭೆ ಚುನಾವಣೆ 2023 ಕ್ಕೆ ಮೇ. 10 ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, ಮತದಾನ ಪ್ರಕ್ರಿಯೆ ಶಾಂತಿಯುತ ಹಾಗೂ ಸುವ್ಯವಸ್ಥಿತವಾಗಿ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಲ್. ಚಂದ್ರಶೇಖರ ನಾಯಕ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಇಂದಿನಿಂದ ರಾಜಕೀಯ ಪಕ್ಷಗಳ ರೋಡ್ ಶೋಗಳು, ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿರ್ಬಂಧಿಸಲಾಗಿದೆ. ಮತದಾನ ಪ್ರಕ್ರಿಯೆ ನಂತರ ಜಿಲ್ಲೆಯ ಏಳು ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆಯನ್ನು ಮೇ 13ರಂದು ನಗರದ ಎಸ್.ಆರ್.ಪಿ.ಎಸ್ ಹಾಗೂ ಎಲ್.ವಿ.ಡಿ ಡಿಗ್ರಿ ಕಾಲೇಜಿನಲ್ಲಿ ನಡೆಸಲಾಗುವುದು. ಅದಕ್ಕಾಗಿ ಸಕಲ ರೀತಿಯ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ ಎಂದು ಎಲ್. ಚಂದ್ರಶೇಖರ ನಾಯಕ ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 1840 ಮತಗಟ್ಟೆಗಳಲ್ಲಿ ವಿಧಾನಸಭೆ ಚುನಾವಣೆಯ ಮತದಾನ ನಡೆಯಲಿದ್ದು, ಜಿಲ್ಲೆಯ ಒಟ್ಟು 16,34,989 ಜನರು ಮತದಾನ ಮಾಡಲಿದ್ದಾರೆ. ಇದರಲ್ಲಿ ಒಟ್ಟು 8,05,594 ಪುರುಷ ಮತದಾರರು, 8,29,133 ಮಹಿಳಾ ಮತದಾರರು ಹಾಗೂ 262 ಇತರೆ ಮತದಾರರು ಮತದಾನ ಮಾಡಲಿದ್ದಾರೆ.
ಈ ಬಾರಿ ಜಿಲ್ಲೆಯಲ್ಲಿ 3,51,42 ಯುವ ಮತದಾರರು ಮತದಾನ ಮಾಡಲಿದ್ದು, ಅದರಲ್ಲಿ 20845 ಪುರುಷ ಯುವ ಮತದಾರರು,14291 ಯುವತಿಯರು ಹಾಗೂ 6 ಇತರೆ ಯುವ ಮತದಾರರು ಮತದಾನ ಮಾಡಲಿದ್ದಾರೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪ್ರತಿಯೊಂದು ಮತಗಟ್ಟೆಯಲ್ಲಿ ಅಂಗವಿಕಲರಿಗೆ ರ‍್ಯಾಂಪ್ ವ್ಯವಸ್ಥೆ, ವ್ಹೀಲ್ ಚೇರ್, ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ ಎಂದು ಎಲ್. ಚಂದ್ರಶೇಖರ ನಾಯಕ ತಿಳಿಸಿದರು.
ಜಿಲ್ಲೆಯಲ್ಲಿ ಮನೆಯಿಂದ ಮತದಾನ ಮಾಡಲು 80 ವರ್ಷ ಮೇಲ್ಪಟ್ಟ 1581 ವೃದ್ಧರು, 410 ಅಂಗವಿಕಲರು ಸೇರಿ ಒಟ್ಟು 1991 ಜನರು ಮನೆಯಿಂದ ಮತದಾನ ಮಾಡಲು ನೋಂದಾಯಿಸಿಕೊಂಡಿದ್ದು, ಅದರಲ್ಲಿ ಒಟ್ಟು 1908 ಜನರು ಮತದಾನವನ್ನು ಮಾಡಿದ್ದಾರೆ. ಉಳಿದಂತೆ 35 ಜನರು ಮರಣ ಹೊಂದಿದ್ದ ಕಾರಣ ಹಾಗೂ 48 ಜನರು ಲಭ್ಯವಿರದ ಕಾರಣ ಮತದಾನದಿಂದ ಹಿಂದುಳಿದಿದ್ದಾರೆ. ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 8931 ಮತಗಟ್ಟೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಹಾಗೂ ವಿಶೇಷಚೇತನರು ಮತ್ತು 80 ವರ್ಷ ಮೇಲ್ಪಟ್ಟ ಮತದಾರರನ್ನು ಕರೆದೋಯ್ಯಲು ಜಿಲ್ಲೆಯಾದ್ಯಂತ 585 ವಾಹನಗಳ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ವಿಧಾನಸಭೆ ಚುನಾವಣೆ ಮತದಾನ ಪ್ರಕ್ರಿಯೆ ಮೇ 10ರಂದು ನಡೆಸಲಾಗುತ್ತಿದ್ದು, ಈ ಬಾರಿ ಶೇ.75 ರಷ್ಟು ಮತದಾನವನ್ನು ಮಾಡುವ ಉದ್ದೇಶದಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಸ್ವೀಪ್ ಸಮಿತಿಯಿಂದ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವಂತೆ ಅರಿವು ಮೂಡಿಸಲಾಗುತ್ತಿದೆ. ಪ್ರತಿ ಮತಗಟ್ಟೆಗಳಲ್ಲಿ 5 ಸಖಿ ಮತಗಟ್ಟೆಗಳು, ತಲಾ ಒಂದು ವಿಶೇಷಚೇತನರು, ಯುವಕರಿಗೆ ಹಾಗೂ ಥೀಮ್ ಬೇಸ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್. ಬಿ, ಅಪರ ಜಿಲ್ಲಾಧಿಕಾರಿ ರವೀಂದ್ರ ಕರಲಿಂಗಣ್ಣವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ವಿಧಾನಸಭಾ ಚುನಾವಣೆಗೆ ಬೆಂಗಳೂರು ಪೊಲೀಸರ ಸಕಲ ಸಿದ್ಧತೆ: ನಿರ್ಭೀತ ಮತದಾನಕ್ಕೆ ವೇದಿಕೆ ಸಿದ್ಧ