ರಾಯಚೂರು: ಜಿಲ್ಲೆಯಲ್ಲಿ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಸ್ಥಾಪನೆಗೆ ಹೋರಾಟದ ರೂಪರೇಶಗಳ ಕುರಿತು ಪ್ರಗತಿಪರ ಸಂಘನೆಗಳ ಮುಖಂಡರು ಸಭೆ ನಡೆಸಿದರು.
ನಗರದಲ್ಲಿ ನಡೆದ ಸಭೆಯಲ್ಲಿ, ಕಳೆದ ಬಾರಿ ಐಐಟಿ ಕೈ ತಪ್ಪಿ ಜಿಲ್ಲೆಗೆ ಆದ ಅನ್ಯಾಯವನ್ನು ಏಮ್ಸ್ ಸ್ಥಾಪನೆಗೆ ಮರುಕಳಿಸದಂತೆ ಎಚ್ಚರಿಕೆಯಿಂದ ಹೋರಾಟ ಮಾಡಬೇಕಾಗಿದ್ದು,ಎಲ್ಲರೂ ಪಕ್ಷ ಬೇಧ ಮರೆತು ಒಂದಾಗಿ ಹೋರಾಟ ನಡೆಸಿದಲ್ಲಿ ಮಾತ್ರ ಇದು ಸಾಧ್ಯವಿದೆ. ಐಐಟಿ ಸ್ಥಾಪನೆಗೆ ಒತ್ತಾಯಿಸಿ ನಡೆಸಿದ ಹೋರಾಟದ ಮಾದರಿಯಲ್ಲಿ ಎಲ್ಲಾ ಸಂಘಟನೆಗಳು, ರಾಜಕೀಯ ಮುಖಂಡರು ಒಂದಾಗಿ ಎಲ್ಲರೂ ಜವಾಬ್ದಾರಿಯಿಂದ ಹೋರಾಟ ನಡೆಸಬೇಕು ಎಂಬ ತೀರ್ಮಾನಕ್ಕೆ ಬರಲಾಯಿತು.
ಎಲ್ಲರೂ ತಮ್ಮ ತಮ್ಮ ಶಕ್ತಿ ಅನುಸಾರ ಒತ್ತಡ- ತಂತ್ರ ಅನುಸರಿಸುವ ಮೂಲಕ ಹೋರಾಟದಲ್ಲಿ ಭಾಗಿಯಾಗಬೇಕು. ಹಾಗೆಯೇ, ಐಐಟಿ ತಪ್ಪಿದ ಹಾಗೆ ಏಮ್ಸ್ ತಪ್ಪಿಸಲು ತೆರೆಯ ಮರೆಯಲ್ಲಿ ಕಾರ್ಯ ನಡೆಯುತ್ತಿದ್ದು ಇದನ್ನು ತಪ್ಪಿಸಬೇಕು. ಅಲ್ಲದೇ, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಯ ಹೋರಾಟದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಚರ್ಚಿಸಲಾಯಿತು.
ಜನಸಗ್ರಾಮ ಪರಿಷತ್ ಸಂಚಾಲಕ ರಾಘವೇಂದ್ರ ಕುಷ್ಟಗಿ ಮಾತನಾಡಿ, ಜಿಲ್ಲೆಗೆ ಏಮ್ಸ್ ಬಂದರೆ ಬಹಳಷ್ಟು ಬದಲಾವಣೆ ಆಗಲಿದೆ. ಈ ಹಿಂದೆ ನಾವು ಬಹಳಷ್ಟು ಕಳೆದುಕೊಂಡಿದ್ದೇವೆ. ಇಂದು ನಾವು ಏಮ್ಸ್ ಪಡೆಯಬೇಕು ಎಂಬ ಸಂಕಲ್ಪವನ್ನು ಮಾಡಿ ವ್ಯಕ್ತಿಗತ, ಸಂಘಟನೆಯ ಹಿತಾಸಕ್ತಿ, ರಾಜಕೀಯ ಹಿತಾಸಕ್ತಿ ಬದಿಗಿಟ್ಟು ಎಲ್ಲರೂ ಒಂದಾಗಿ ಹೋರಾಟ ನಡೆಸಬೇಕು ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಮಾತನಾಡಿ, ಇಲ್ಲಿಯವರೆಗೂ ಜಿಲ್ಲೆಗೆ ರಾಜಕೀಯವಾಗಿ ಯಾವ ಪ್ರಾತಿನಿಧ್ಯ ಸಿಕ್ಕಲಿಲ್ಲ, ಇಂದು ಮುಖ್ಯ ಮಂತ್ರಿಗಳ ಆದೇಶಕ್ಕೂ ಬೆಲೆ ಇಲ್ಲದ ಆಡಳಿತದಲ್ಲಿ ನಾವಿದ್ದು, ಜಿಲ್ಲೆಯ ಜನ ಪ್ರತಿನಿಧಿಗಳು ತಮ್ಮ ಜವಾಬ್ದಾರಿ ಮರೆತು ಹೊಗಿದ್ದು, ನೀವು ಕರೆದಿರಿ ಅದಕ್ಕೆ ನಾವು ಬಂದೆವು ಅನ್ನುವ ಪರಿಸ್ಥಿತಿಯಲ್ಲಿದ್ದೇವೆ. ಮತದಾರರ ಋಣ ತೀರಿಸುವ ಕೆಲಸ ಜಿಲ್ಲೆಯ ಜನಪ್ರತಿನಿಧಿಗಳಿಂದ ಆಗಬೇಕು. ಜಿಲ್ಲೆಗೆ ಏಮ್ಸ್ ತರುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಎಲ್ಲರೂ ಒಂದಾಗಿ ರಾಜಕೀಯ ಒತ್ತಡ ತಂದಲ್ಲಿ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದರು.
ಹೋರಾಟಗಾರ ಬಸವರಾಜ ಕಳಸ ಮಾತನಾಡಿ, ರಾಜಕೀಯ ಸೇರಿದಂತೆ ಎಲ್ಲಾ ಸಂಘಟನೆಗಳು ಒಂದಾಗಿ ಹೋರಾಟ ನಡೆಸುವ ನಿಟ್ಟಿನಲ್ಲಿ ಸಲಹೆ ಸೂಚನೆ ನೀಡಲು ಮನವಿ ಮಾಡಿದರು.
ಸಭೆಯಲ್ಲಿ ತಾರನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಲ್ ಸುಖಾಣಿ, ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ಸಂಚಾಲಕ ರಜಾಕ್ ಉಸ್ತಾದ್, ಸೇರಿದಂತೆ ರಾಜಕೀಯ ಮುಖಂಡರು, ವಿವಿಧ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.