ರಾಯಚೂರು: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಜಲಾಶಯದ ನೀರಿನ ಒಳಹರಿವು ಹೆಚ್ಚಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಭೀತಿ ಶುರುವಾಗಿದೆ.
ಇಂದು ಬೆಳಗ್ಗೆ ಲಕ್ಷಾಂತರ ಕ್ಯೂಸೆಕ್ ನೀರನ್ನ ನದಿಗೆ ಹರಿಬಿಟ್ಟಿದ್ದು, ಇದರಿಂದ ಜಿಲ್ಲೆಯ ಸಿಂಧನೂರು, ಮಾನವಿ, ರಾಯಚೂರು ತಾಲೂಕಿನ ನದಿ ತೀರದ ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಹೀಗಾಗಿ ನದಿಗೆ ಜನ-ಜಾನುವಾರು ತೆರಳದಂತೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಎಚ್ಚರಿಕೆ ನೀಡುವ ಮೂಲಕ ನದಿ ತೀರದಲ್ಲಿ ಡಂಗೂರ ಸಾರುವುದು, ಮೈಕ್ ಸೇರಿದಂತೆ ಇತರ ರೀತಿಯಲ್ಲಿ ಗ್ರಾಮಸ್ಥರನ್ನು ಎಚ್ಚರಿಸಲಾಗುತ್ತಿದೆ.
ಕಲಬುರಗಿ ಸೊನ್ನ ಬ್ಯಾರೇಜ್ ಭರ್ತಿಯಾಗಿ ನದಿಗೆ ಬ್ಯಾರೇಜ್ನಿಂದ ಸುಮಾರು 1.60 ಲಕ್ಷ ಕ್ಯೂಸೆಕ್ ನೀರನ್ನು ಹರಿ ಬಿಡಲಾಗಿದೆ. ಈ ನೀರು ರಾಯಚೂರು ತಾಲೂಕಿನ ಕೃಷ್ಣ ನದಿಗೆ ಸೇರುತ್ತವೆ. ಹೀಗಾಗಿ ರಾಯಚೂರು ತಾಲೂಕಿನ ನದಿ ತೀರದ ಗ್ರಾಮಗಳು, ನಡುಗಡ್ಡೆ ಪ್ರದೇಶದ ಜನರಿಗೆ ನದಿ ತೀರಕ್ಕೆ ತೆರಳದಂತೆ, ಜಾನುವಾರುಗಳನ್ನು ನದಿಗೆ ಬೀಡದಂತೆ ಮುಂಜಾಗ್ರತಾ ಕ್ರಮವಾಗಿ ಜನರಿಗೆ ಎಚ್ಚರಿಸಲಾಗುತ್ತಿದೆ.