ರಾಯಚೂರು: ಬಿಸಿಲೂರು ರಾಯಚೂರು ಜಿಲ್ಲೆಯಲ್ಲಿ ಆಫ್ರಿಕನ್ ಸ್ವೈನ್ ಫ್ಲೂ ಜ್ವರ ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಆತಂಕವನ್ನು ಮೂಡಿಸಿದೆ. ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ(ಚಿನ್ನದ ಗಣಿ)ಯಲ್ಲಿ ಹಂದಿಗಳಲ್ಲಿ ಆಫ್ರಿಕನ್ ಸ್ವೈನ್ ಫ್ಲೂ ಕಾಣಿಸಿಕೊಂಡ ಪರಿಣಾಮ, ಅವು ಸಾವನ್ನಪ್ಪುತ್ತಿವೆ. ಹೀಗಾಗಿ ಅಲ್ಲಿನ ಸ್ಥಳೀಯರಿಗೆ ಜ್ವರ ಆವರಿಸುತ್ತಾ ಎಂಬ ಭೀತಿಯಲ್ಲಿ ಜನರು ಕಾಲ ಕಳೆಯುತ್ತಿದ್ದಾರೆ.
ಕಳೆದ ತಿಂಗಳಿನಿಂದ ಇಲ್ಲಿಯವರೆಗೆ ಸುಮಾರು 100ಕ್ಕೂ ಹಂದಿಗಳು ಆಫ್ರಿಕನ್ ಸ್ವೈನ್ ಫ್ಲೂದಿಂದ ಮೃತಪಟ್ಟಿವೆ. ಹಂದಿಗಳ ಸಾವು ಕುರಿತಂತೆ ಮಾದರಿ ಪರೀಕ್ಷೆಗೆ ಒಳಪಡಿಸಿದ ವೇಳೆ ಆಫ್ರಿಕನ್ ಹಂದಿ ಜ್ವರ ಎನ್ನುವುದು ಖಾತರಿಯಾಗಿದೆ. ಹಟ್ಟಿ ಚಿನ್ನದ ಗಣಿ ಕ್ಯಾಂಪ್‌ನಲ್ಲಿ ಇರುವ ಹಂದಿಗಳು ಮಾತ್ರ ಸಾವಿಗೀಡಾಗುತ್ತಿವೆ. ಅಫ್ರಿಕನ್ ಹಂದಿ ಜ್ವರದಿಂದ ಅಲ್ಲಿ ವಾಸಿಸುವ ಕಾರ್ಮಿಕರು ಆತಂಕಕ್ಕೊಳಗಾಗಿದ್ದಾರೆ. ಯಾರಿಗಾದರೂ ಆರೋಗ್ಯದಲ್ಲಿ ಸಣ್ಣಪುಟ್ಟ ವ್ಯತ್ಯಾಸ ಕಂಡುಬಂದರೂ ಭಯಪಡುತ್ತಿದ್ದಾರೆ.
ಮುನ್ನೆಚ್ಚರಿಕೆ ವಹಿಸುವಂತೆ ಹಟ್ಟಿಚಿನ್ನದ ಗಣಿ ಕಂಪನಿ ಸೂಚನೆ: ದುರುಗಪ್ಪ ಎಂಬುವರ ಖಾಸಗಿ ಹಂದಿ ಸಾಕಣೆ ಕೇಂದ್ರದಲ್ಲಿನ ಹಂದಿಗಳಲ್ಲಿ ಆಫ್ರಿಕನ್ ಸ್ವೈನ್ ಫ್ಲೂ ದೃಢಪಟ್ಟಿದೆ. ಹಂದಿ ಸಾಕಣೆ ಕೇಂದ್ರದ ಸುತ್ತ ಹಟ್ಟಿ ಪಟ್ಟಣದ ಒಂದು ಕಿ ಮೀ ವ್ಯಾಪ್ತಿ ಪ್ರದೇಶವನ್ನು ರೋಗಪೀಡಿತ ವಲಯ ಎಂದು ಘೋಷಿಸಲಾಗಿದೆ. 10 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಜಾಗೃತ ವಲಯ ಎಂದು ಘೋಷಿಸಲಾಗಿದೆ. ಹೀಗಾಗಿ ಹಂದಿ ಸಾಕಣೆ ಕೇಂದ್ರದವರು ಹಾಗೂ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಹಟ್ಟಿ ಚಿನ್ನದ ಗಣಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಜನರಲ್ಲಿ ಆತಂಕ: ಹಟ್ಟಿ ಪ್ರದೇಶ ವ್ಯಾಪ್ತಿಯಲ್ಲಿ ಇರುವ ಹಂದಿಗಳು ಆಫ್ರಿಕನ್ ಸ್ವೈನ್ ಫ್ಲೂದಿಂದ ಬಹಳಷ್ಟು ಮೃತಪಡುತ್ತಿರುವುದರಿಂದ ಜನರಲ್ಲಿ ಭಯ ಆವರಿಸಿದೆ. ಆಫ್ರಿಕನ್ ಸ್ವೈನ್ ಫ್ಲೂದಿಂದ ಹಂದಿಗಳು ಸಾಯುತ್ತಿದ್ದರೂ ಪಟ್ಟಣ ಪಂಚಾಯಿತಿಯು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿಲ್ಲ. ಹಟ್ಟಿ ಪ್ರದೇಶ ಅಷ್ಟೇ ಅಲ್ಲದೇ ಸುತ್ತಮುತ್ತಲು ಇರುವ ಹಳ್ಳಿಗಳ ಜನರಲ್ಲಿಯೂ ಭಯ ಎದುರಾಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಲಿಂಗಪ್ಪ.
ಅಫ್ರಿಕನ್ ಹಂದಿ ಜ್ವರ ಮನುಷ್ಯರಿಗೆ ಹರಡುವದಿಲ್ಲ:ವೈದ್ಯರ ಸಲಹೆ.. ವೈದ್ಯರು ಮಾತ್ರ ಆಫ್ರಿಕನ್ ಹಂದಿ ಜ್ವರ ಕೇವಲ ಹಂದಿಗಳಲ್ಲಿ ಮಾತ್ರದಲ್ಲಿ ಕಂಡು ಬರುತ್ತದೆ. ಮನುಷ್ಯರಿಗೆ ಈ ಜ್ವರ ಹರಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಸಾರ್ವಜನಿಕರು ಯಾವುದೇ ರೀತಿ ಆತಂಕ ಪಡದೇ ತಮ್ಮ ವಾಸಿಸುವ ಸುತ್ತಮುತ್ತಲ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಕಡೆ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ. ಅಲ್ಲದೇ ಮನುಷ್ಯರಿಗೆ ಆಫ್ರಿಕನ್ ಹಂದಿ ಜ್ವರ ಬಂದಿರುವ ಬಗ್ಗೆ ಇದುವರೆಗೆ ಎಲ್ಲೂ ವರದಿಯಾಗಿಲ್ಲವೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ ಸುರೇಂದ್ರ ಬಾಬು ಸ್ಪಷ್ಟಪಡಿಸಿದ್ದಾರೆ.
ಸದ್ಯ ಡೆಂಗ್ಯೂ ಜ್ವರದ ಭೀತಿ ನಡುವೆ ಈಗ ಹಂದಿಗಳಲ್ಲಿ ಆಫ್ರಿಕನ್ ಸ್ವೈನ್ ಫ್ಲೂ ಜ್ವರ ಕಾಣಿಸಿಕೊಂಡಿರುವುದು ಜಿಲ್ಲೆಯ ಜನತೆಯಲ್ಲಿ ಆತಂಕ ಮೂಡಿಸಿದೆ. ಸ್ಥಳೀಯವಾಗಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ ಅಧಿಕಾರಿಗಳು ಹಂದಿಗಳ ಸಾಕಣೆ ಮಾಡುವವರಿಗೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
ಇದನ್ನೂಓದಿ:ಆಫ್ರಿಕನ್ ಹಂದಿ ಜ್ವರ ಹಾವಳಿ: 1 ಸಾವಿರ ಹಂದಿಗಳ ಹತ್ಯೆ.. ಎಲ್ಲೆಡೆ ಮುನ್ನೆಚ್ಚರಿಕೆ!