ರಾಯಚೂರು: ಪ್ರಸಿದ್ಧ ಧಾರ್ಮಿಕ ಕೇಂದ್ರ ರಾಯಚೂರು ಸಾಧನಗುಡಿಯ ಶ್ರೀ ಆಂಜನೇಯನ ದೇವಸ್ಥಾನಕ್ಕೆ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಮಂಗಳವಾರ ಭೇಟಿ ನೀಡಿದ್ದಾರೆ. ವಿಶೇಷ ದಿನದ ಹಿನ್ನೆಲೆ ನಗರದ ಗಾಂಧಿ ವೃತ್ತದ ಬಳಿ ಇರುವ ಶ್ರೀ ಆಂಜನೇಯನ ದೇವಾಲಯಕ್ಕೆ ಆಗಮಿಸಿದ ಅವರು ಆಂಜನೇಯನ ದರ್ಶನ ಪಡೆದುಕೊಂಡು, ವಿಶೇಷ ಪೂಜೆ ನೆರವೇರಿಸಿದ್ದಾರೆ. ಇದಾದ ಬಳಿಕ ದೇವಾಲಯದ ಆರ್ಚಕರೊಂದಿಗೆ ಕುಶಲೋಪಕಾರಿ ಚರ್ಚೆ ನಡೆಸಿ ವಾಪಾಸ್ ಬೆಂಗಳೂರಿಗೆ ಮರಳಿದ್ದಾರೆ. ಹೈದರಾಬಾದ್ ಮೂಲಕ ರಸ್ತೆ ಮಾರ್ಗವಾಗಿ ರಾಯಚೂರು ನಗರಕ್ಕೆ ಆಗಮಿಸಿದ್ದ ಕಿಚ್ಚ ಸುದೀಪ್, ನೇರವಾಗಿ ದೇವಾಲಯಕ್ಕೆ ತೆರಳಿ ಶ್ರೀ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ಭಕ್ತಿ ಅರ್ಪಿಸಿದ್ದಾರೆ.
ದೇವಾಲಯದ ಹಳೆಯ ಕಟ್ಟಡವನ್ನು ತೆರವುಗೊಳಿಸಿ, ಹೊಸ ದೇವಾಸ್ಥಾನವನ್ನು ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಅವರು, ದೇಗುಲದ ಆರ್ಚಕರಾದ ಪವನ್ ಆಚಾರರೊಂದಿಗೆ ಕೆಲಹೊತ್ತು ಚರ್ಚೆ ನಡೆಸಿದ್ದಾರೆ. ಚರ್ಚೆಯ ಬಳಿಕ ಆರ್ಚಕರು ನಟ ಸುದೀಪ್ ಅವರನ್ನು ಸನ್ಮಾನಿಸಿ ಗೌರವಿಸಿ ಬೀಳ್ಕೊಟ್ಟರು. ದರ್ಶನ ಹಾಗೂ ಪೂಜೆ ಮುಗಿಸಿದ ನಂತರ ರಾಯಚೂರು ರಸ್ತೆ ಮಾರ್ಗವಾಗಿ ಹೈದರಾಬಾದ್ಗೆ ತೆರಳಿ ಅಲ್ಲಿಂದ ಬೆಂಗಳೂರಿಗೆ ತೆರಳಿದ್ದಾರೆ. ಕಳೆದ ಹಲವು ವರ್ಷಗಳ ಹಿಂದೆ ಈ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದುಕೊಂಡಿದ್ದರು. ಬಹಳ ದಿನಗಳ ಆಗಿದ್ದರಿಂದ ಈ ದೇವಾಲಯಕ್ಕೆ ಬಂದಿರಲ್ಲ. ಇದಾದ ಬಳಿಕ ಇದೀಗ ಮತ್ತೆ ಆಗಮಿಸಿ ವಿಶೇಷ ಪೂಜೆ ನೆರವೇರಿಸಿದ್ದಾರೆ.
ಪುರಾಣ ಪ್ರಸಿದ್ಧ ದೇವಸ್ಥಾನ: ಈ ಆಂಜನೇಯ ಸ್ವಾಮಿ ದೇಗುಲವು ಪುರಾಣ ಪ್ರಸಿದ್ಧ ದೇವಸ್ಥಾನವಾಗಿದ್ದು ತನ್ನದೇಯಾದ ಇತಿಹಾಸ ಹೊಂದಿದೆ. ಅಲ್ಲದೇ ಇಲ್ಲಿರುವ ಮಾರುತಿ ದೇವರು ಭಾರೀ ಪ್ರಭಾವಿ ಶಾಲಿಯಾಗಿದ್ದು, ಮನಸ್ಸಿನಲ್ಲಿ ಏನನ್ನಾದರೂ ಬೇಡಿಕೊಂಡಿಕೊಂಡರೆ ಈಡೇರುತ್ತದೆ ಎನ್ನುವ ನಂಬಿಕೆ ಇಲ್ಲಿಯ ಜನರದ್ದಾಗಿದೆ. ಹೀಗಾಗಿ ಹಿಂದೆ ಘನವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಪವರ್ಸ್ಟಾರ್ ಪುನೀತ್ರಾಜ್ ಕುಮಾರ್, ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಸೇರಿದಂತೆ ರಾಜಕೀಯ ಗಣ್ಯರು ಭೇಟಿ ನೀಡಿದ್ದರು.
ಕಿಚ್ಚ ಸುದೀಪ್ ಹನುಮಾನ್ ದೇವರ ಪರಮ ಭಕ್ತರು. ಅವರು ಈ ಹಿಂದೆ ಹಳೆಯ ದೇವಾಸ್ಥಾನ ಇದ್ದಗಲೂ ಬಂದಿದ್ದರು. ಇದೀಗ ಹಳೆಯ ದೇವಾಸ್ಥಾನವನ್ನು ತೆರವುಗೊಳಿಸಿ, ಹೊಸ ದೇವಾಲಯವನ್ನು ನಿರ್ಮಾಣ ಮಾಡಲಾಗುತ್ತಿದೆ. ಅದರ ಕಾಮಗಾರಿಯನ್ನು ಮತ್ತೆ ಕಣ್ತುಂಬಿಕೊಂಡರು.
ವಿಶೇಷ ಭೇಟಿ ಬಗ್ಗೆ ಮಾಹಿತಿ ನೀಡಿದ ದೇವಸ್ಥಾನ ಪ್ರಧಾನ ಆರ್ಚಕ: ಬರುವಂತಹ ದಿನಗಳಲ್ಲಿ ದೇವಾಲಯ ಕಾಮಗಾರಿ ಪೂರ್ಣಗೊಂಡ ಬಳಿಕ ದೇಗುಲ ಉದ್ಘಾಟನೆಗೆ ಆಗಮಿಸುವುದಾಗಿ ತಿಳಿಸಿದ್ದಾರೆ ಎಂದು ದೇವಸ್ಥಾನ ಪ್ರಧಾನ ಆರ್ಚಕರಾದ ಪವನ್ ಆಚಾರ್ ಈಟಿವಿ ಭಾರತ ಪ್ರತಿನಿಧಿಯೊಂದಿಗೆ ದೂರವಾಣಿಯಲ್ಲಿ ತಿಳಿಸಿದ್ದಾರೆ.
ಅಭಿಮಾನಿಗಳಿಗೆ ನಿರಾಶೆ: ರಾಯಚೂರು ಜಿಲ್ಲೆಯಾದ್ಯಂತ ಕಿಚ್ಚ ಸುದೀಪ್ ಅಭಿಮಾನಗಳು ಅಪಾರ ಸಂಖ್ಯೆಯಲ್ಲಿ ಇದ್ದಾರೆ. ರಾಯಚೂರಿಗೆ ಬರುವ ವಿಚಾರ ಯಾರಿಗೂ ಮಾಹಿತಿ ನೀಡಿರಲಿಲ್ಲ. ದಿಢೀರ್ ಬಂದು ದರ್ಶನ ಪಡೆದುಕೊಂಡು ವಾಪಾಸ್ ಆಗಿದ್ದಾರೆ. ಇವರು ರಾಯಚೂರಿಗೆ ಬಂದು ದೇವಾಸ್ಥಾನಕ್ಕೆ ಭೇಟಿ ನೀಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಮ್ಮ ನೆಚ್ಚಿನ ನಟ ನಗರಕ್ಕೆ ಬಂದರೂ, ನೋಡಲು ಆಗಲಿಲ್ಲ ಎನ್ನುವ ನಿರಾಶೆಯ ಮಾತುಗಳು ಕಿಚ್ಚ ಅಭಿಮಾನ ಬಳಗದಲ್ಲಿ ಕೇಳಿಬರುತ್ತಿವೆ.
ಇದನ್ನೂ ಓದಿ: ವಿಷ್ಣು ಅಭಿಮಾನಿಗಳಿಗೆ ಗುಡ್ ನ್ಯೂಸ್.. ಸಂಜೆ ಅವಧಿಯಲ್ಲೂ ಸ್ಮಾರಕ ವೀಕ್ಷಣೆಗೆ ಅವಕಾಶ