ರಾಯಚೂರು: ಜಾನುವಾರುಗಳಿಗಾಗಿ ಸಂಗ್ರಹಿಸಿಡಲಾಗಿದ್ದ ಮೇವಿನ ಬಣವೆಗೆ ಬೆಂಕಿ ಹಚ್ಚಿದ ಆರೋಪಿಯನ್ನ ತುರುವಿಹಾಳ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.
ಜಿಲ್ಲೆಯ ಸಿಂಧನೂರು ತಾಲೂಕಿನ ಗಾಂಧಿನಗರದ ನಿವಾಸಿ ಜಿ.ರವಿಕುಮಾರ ಚಿರಂಜೀವಿ ಬಂಧಿತ ಆರೋಪಿ. 2020 ಆ.16ರಂದು ಕೆ.ಹಂಚಿನಾಳ, ಜಂಬುನಾಥನಹಳ್ಳಿ ಸೀಮಾ ವ್ಯಾಪ್ತಿಯಲ್ಲಿ ಬರುವ ಹಲವು ರೈತರು ತಮ್ಮ ಜಾನುವಾರುಗಳಿಗಾಗಿ ಹೊಲದಲ್ಲಿ ಮೇವಿನ 17 ಬಣವೆಗಳನ್ನ ಸಂಗ್ರಹಿಸಿಟ್ಟಿದ್ದರು. ಆದ್ರೆ ಇಲ್ಲಿನ ರೈತರು ಹಾಲಿನ ಡೈರಿಯನ್ನ ಮಾಡಿದ್ದು, ರವಿಕುಮಾರ ಹಾಲಿಗೆ ಹೆಚ್ಚು ನೀರು, ಹಾಗೂ ಯೂರಿಯ ಬಳಕೆ ಮಾಡುತ್ತಿದ್ದುದರಿಂದ ಈ ರೀತಿ ಮಾಡದಂತೆ ಎಚ್ಚರಿಸಿದ್ದಾರೆ.
ಈ ವಿಚಾರಕ್ಕಾಗಿ ಡೈರಿಯ ಸದಸ್ಯರಿಗೆ ಬುದ್ದಿ ಕಲಿಸಬೇಕೆಂದು ಹಠ ತೊಟ್ಟ ರವಿಕಮಾರ್, 17 ಬಣವೆಗಳಿಗೆ ಬೆಂಕಿ ಹಚ್ಚಿದ್ದು, ಪರಿಣಾಮ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡು, ಬಣವೆ ಪಕ್ಕದಲ್ಲಿನ ಎಮ್ಮೆ ಶೆಡ್ ಗೆ ಬೆಂಕಿ ತಾಗಿ ನಾಲ್ಕು ಎಮ್ಮೆಗಳು ಸಾವಿಗೀಡಾಗಿವೆ. ಹೀಗಾಗಿ ಬಣವೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಯನ್ನು ಸೆರೆ ಹಿಡಿಯಬೇಕೆಂದು ತುರುವಿಹಾಳ ಠಾಣೆಗೆ ರೈತರು ದೂರು ನೀಡಿದ್ದಾರೆ.
ರೈತರ ದೂರಿನ ನಂತರ ಎಸ್ಪಿ ಪ್ರಕಾಶ್ ನಿಕ್ಕಮ್, ಹೆಚ್ಚುವರಿ ಎಸ್ಪಿ ಹರಿಬಾಬು ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಮೇರೆಗೆ ತುರವಿಹಾಳ ಠಾಣೆಯ ಪೊಲೀಸರು ಆರೋಪಿಯನ್ನ ಸೆರೆ ಹಿಡಿಯುವಲ್ಲಿ ಯಶ್ವಸಿಯಾಗಿದ್ದು, ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.