ರಾಯಚೂರು: ಸಿಂಧನೂರು ಜೆಡಿಎಸ್ ಶಾಸಕ, ಮಾಜಿ ಸಚಿವ ವೆಂಕಟರಾವ್ ನಾಡಗೌಡ ಹಾಗೂ ಗ್ರಾಮಸ್ಥನೋರ್ವನ ನಡುವೆ ಮಾತಿನ ಚಕಮಕಿ ನಡೆದಿರುವ ಪ್ರಸಂಗ ಬೆಳಕಿಗೆ ಬಂದಿದೆ.
ಜಿಲ್ಲೆಯ ಸಿಂಧನೂರು ತಾಲೂಕಿನ ರೌಡಕುಂದಾ ಗ್ರಾಮಕ್ಕೆ ಶಾಸಕ ವೆಂಕಟರಾವ್ ನಾಡಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ರು. ಈ ವೇಳೆ ಗ್ರಾಮಸ್ಥನೋರ್ವ ಏತ ನೀರಾವರಿ ವಿಚಾರವಾಗಿ ವಿಷಯವನ್ನ ಪ್ರಸ್ತಾಪಿಸುತ್ತಿದ್ದರು. ಈ ಕುರಿತಂತೆ ಚರ್ಚೆ ಮಾಡುವ ವೇಳೆ ಮಾತಿನ ಚಕಮಕಿ ನಡೆದಿದೆ. ಬಳಿಕ ಶಾಸಕ ವೆಂಕಟರಾವ್ ನಾಡಗೌಡ ನೀನು ಯಾರಿಗೆ ವೋಟ್ ಹಾಕಿದ್ದೀಯಾ?, ಅವರ ಬಳಿ ಹೋಗಿ ಕೇಳು ಎಂದು ಗದರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ ಶಾಸಕರೊಂದಿಗೆ ಮಾತನಾಡುತ್ತಿದ್ದ ಗ್ರಾಮಸ್ಥನಿಗೆ ಸ್ಥಳೀಯರು ಸಹ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಕುರಿತ ವಿಡಿಯೋವೊಂದು ವೈರಲ್ ಆಗಿದೆ.
ಈ ಬಗ್ಗೆ ಈಟಿವಿ ಭಾರತ ಪ್ರತಿನಿಧಿಯು ಶಾಸಕರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಲಿಫ್ಟ್ ಇರಿಗೇಶನ್ ವಿಚಾರವಾಗಿ ಮಾತನಾಡುವ ವೇಳೆ ಗ್ರಾಮಸ್ಥ ಒರಟಾಗಿ ಮಾತನಾಡಿದ್ದ. ಆಗ ಅಲ್ಲಿನ ಜನರೇ ಆತನಿಗೆ ಬೈದು ಕಳುಹಿಸಿದ್ದಾರೆ. ಯಾರಿಗೆ ವೋಟ್ ಹಾಕಿದ್ದೀರಾ ಅಂತ ನಾನು ಕೇಳಿಲ್ಲ, ಹಾಗಂತ ಸ್ಥಳೀಯರೇ ಆತನಿಗೆ ಕೇಳಿದ್ರು ಎಂದು ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡ ಸ್ಪಷ್ಟನೆ ನೀಡಿದ್ದಾರೆ.
ಇನ್ನು, ಶಾಸಕರೊಂದಿಗೆ ಮಾತನಾಡುವ ವೇಳೆ ವ್ಯಕ್ತಿ ಮದ್ಯಪಾನ ಮಾಡಿದ್ದ ಎಂದು ಹೇಳಲಾಗುತ್ತಿದೆ.