ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹದಗೆಟ್ಟಿದ್ದು, ಮಳೆ ಬಂದಾಗ ಕೆಸರು ಗದ್ದೆಯಂತಾಗುತ್ತವೆ.
ಕೃಷ್ಣಾ ನದಿ ದಂಡೆಯ ಗೂಗಲ್ ಗ್ರಾಮದಲ್ಲಿ ಪ್ರಸಿದ್ಧ ಶ್ರೀ ಅಲ್ಲಮ ಪ್ರಭುಲಿಂಗೇಶ್ವರ ದೇವಸ್ಥಾನವಿದ್ದು, ಈ ರಸ್ತೆಯಲ್ಲಿ ದಿನಾಲು ಜನರು ಓಡಾಡುತ್ತಿರುತ್ತಾರೆ. ಆದರೆ ರಸ್ತೆಯ ಸಮಸ್ಯೆಯಿಂದಾಗಿ ಜನರಿಗೆ ತೊಂದರೆಯಾಗುತ್ತಿದ್ದು, ರಸ್ತೆ ಮಧ್ಯದಲ್ಲಿ ಬರುವ ಹಳ್ಳಗಳಿಗೆ ಸರಿಯಾಗಿ ಸೇತುವೆ ನಿರ್ಮಾಣವಿಲ್ಲದ ಕಾರಣ ವಾಹನ ಸವಾರರು ನರಕ ಯಾತನೆ ಅನುಭವಿಸುವಂತಾಗುತ್ತದೆ.
ಯಮನಾಳದಿಂದ ಗೂಗಲ್ ಹಾಗೂ ಸುಂಕೇಶ್ವರಹಾಳದಿಂದ ಗೂಗಲ್ ಗ್ರಾಮಕ್ಕೆ ಸಂಪರ್ಕಿಸುವ ಸುಮಾರು 45 ಕಿ.ಮೀ ರಸ್ತೆ ಹಾಳಾಗಿದೆ. ದಿನನಿತ್ಯ ಈ ರಸ್ತೆಯಲ್ಲಿ ಸಾಕಷ್ಟು ವಾಹನಗಳು ಸಂಚರಿಸುತ್ತಿದ್ದು, ರಾತ್ರಿ ವೇಳೆ ಹಲವಾರು ಅಪಘಾತಗಳು ಉಂಟಾಗುತ್ತಿವೆ.
ಹಲವು ಬಾರಿ ರಸ್ತೆ ದುರಸ್ತಿ ಕಾರ್ಯ ಮಾಡುವಂತೆ ಸಾರ್ವಜನಿಕರು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿ ಮನವಿ ಮಾಡಿದ್ದಾರೆ. ಆದರೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಯಾಗಲಿ ಇದುವರೆಗೂ ತಲೆ ಕೆಡಿಸಿಕೊಂಡಿಲ್ಲ.