ರಾಯಚೂರು: ನಗರದ ಸಿಯಾತಲಾಬ್ ಬಡಾವಣೆಯಲ್ಲಿನ ಸಂತೋಷಿ ಸಿನಿಮಾ ಮಂದಿರ ಪರವಾನಗಿಯನ್ನು ಜಿಲ್ಲಾಧಿಕಾರಿ ರದ್ದುಗೊಳಿಸಲು ಸೂಚನೆ ನೀಡಿದ್ದಾರೆ.
ಸರ್ವೆ ನಂ.33/1ರಲ್ಲಿ ನಿರ್ಮಾಣ ಮಾಡಲಾಗಿರುವ ಸಂತೋಷಿ ಸಿನಿಮಾ ಮಂದಿರ ಇದಾಗಿದ್ದು, ಸಿನಿಮಾ ಮಂದಿರ ಮಾಲೀಕರಿಗೆ 2016ರಿಂದ ನಿತ್ಯ ₹100 ದಂಡ ವಿಧಿಸಿ ಆದೇಶಿಸಿದ್ದಾರೆ.
ಈ ಬಡಾವಣೆಯ 39.22 ಎಕರೆ ಜಮೀನು ಅತಿಕ್ರಮಣ ಕುರಿತಂತೆ ವಿಚಾರಣೆ ನಡೆಸಿ, ಸುಳ್ಳು ದಾಖಲೆ ನೀಡಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಗೌತಮ್ ಬಗಾದಿ ಸಿನಿಮಾ ಮಂದಿರ ತೆರವಿಗೆ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ, ಮಾಲೀಕರಾದ ಸುನೀಲ್ ಅಗರವಾಲ್ ಮತ್ತು ವೆಂಕಟೇಶ್ವರರಾವ್ ಕಲಬುರಗಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಆಗ ನ್ಯಾಯಾಲಯ ಜಿಲ್ಲಾಧಿಕಾರಿಗಳ ಆದೇಶವನ್ನು ರದ್ದುಗೊಳಿಸಿ ಮರು ಪರಿಶೀಲನೆಗೆ ಸೂಚನೆ ನೀಡಿತ್ತು.
ಗೌತಮ್ ಬಗಾದಿ ವರ್ಗಾವಣೆ ಬಳಿಕ ಬಂದ ಜಿಲ್ಲಾಧಿಕಾರಿಗಳು ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸುನೀಲ್ ಅಗರವಾಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಕ್ರಮಕೈಗೊಂಡು ವರದಿ ಸಲ್ಲಿಸುವಂತೆ ಸೂಚನೆ ನೀಡಿತ್ತು.
ಬಡಾವಣೆಯಲ್ಲಿನ ಸರ್ಕಾರಿ ಜಮೀನು ಅಕ್ರಮಿಸಿಕೊಂಡ ಸ್ಥಳೀಯರಿಗೆ ನೋಟಿಸ್ ಜಾರಿ ಮಾಡಿದ್ದು, ಈ ಬಗ್ಗೆ ವಿಚಾರಣೆ ನಡೆಸುವುದು ಜಟಿಲವೆಂದು ಜಿಲ್ಲಾಡಳಿತ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ನ್ಯಾಯಾಲಯ ಅರ್ಜಿದಾರರ ವ್ಯಾಜ್ಯ ಇತ್ಯರ್ಥಕ್ಕೆ ಸೂಚನೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ವಿಚಾರಣೆ ನಡೆಸಿ ಸಿನಿಮಾ ಮಂದಿರಕ್ಕೆ ನೀಡಲಾಗಿದ್ದ ಪರವಾನಗಿಯನ್ನು ರದ್ದುಗೊಳಿಸಿ, ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾಡಳಿತದ ಪರವಾಗಿ ಸರ್ಕಾರಿ ವಕೀಲ ಎನ್.ಶಿವಶಂಕರ, ನಗರಸಭೆ ಪರವಾಗಿ ವಕೀಲ್ ಅಬ್ದುಲ್ ರಬ್ ವಾದ ಮಂಡಿಸಿದ್ದರು.