ರಾಯಚೂರು: ''ಕೆಲವು ರಾಜಕೀಯ ಮುಖಂಡರು ರಾಜಕೀಯ ಷಡ್ಯಂತ್ರ ನಡೆಸಿ ಗ್ರಾ. ಪಂ. ಸದಸ್ಯರಿಗೆ ದಾರಿ ತಪ್ಪಿಸುತ್ತಿದ್ದಾರೆ. ರಾಜೀನಾಮೆ ಕೊಟ್ಟ ಸದಸ್ಯರನ್ನು ಮನವೊಲಿಸಿ ಉತ್ತಮ ಆಡಳಿತ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು'' ಎಂದು ಆರ್.ಹೆಚ್. ಕ್ಯಾಂಪನ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಂ. ರೆಹಮತ್‌ಪಾಷಾ ಹೇಳಿದರು.
ಜಿಲ್ಲೆಯ ಸಿಂಧನೂರು ಪಟ್ಟಣದ ಶಾಸಕರ ಮನೆಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ''ಸದಸ್ಯರೆಲ್ಲರ ಒತ್ತಾಸೆಯಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೆ. ಎಲ್ಲರೂ ಒಳ್ಳೆಯ ಸಹಕಾರ ನೀಡಿದ್ದು, ಅಧ್ಯಕ್ಷರಾಗಿ ಚುನಾಯಿತರನ್ನಾಗಿಸಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲರೂ ಭಾವೈಕ್ಯತೆಯಿಂದ ಜೀವನ ಮಾಡುತ್ತಿದ್ದೇವೆ. ನಾನು ಗ್ರಾ.ಪಂ. ಸದಸ್ಯ ಸ್ಥಾನಕ್ಕೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಅನಿವಾಸಿ ಬಂಗಾಲಿ ಮತದಾರರೇ ನನ್ನನ್ನು ಹೆಚ್ಚಿನ ಬಹುಮತ ನೀಡಿ ಗೆಲ್ಲಿಸಿದ್ದರು. ಕೆಲವರ ರಾಜಕೀಯ ಷಡ್ಯಂತ್ರ ನಡೆದಿದೆ. ಆದ್ರೆ, ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ'' ಎಂದರು.
''ಒಟ್ಟು 38 ಸದಸ್ಯರಲ್ಲಿ 15 ಜನ ಮಾತ್ರ ರಾಜೀನಾಮೆ ನೀಡಿದ್ದಾರೆ. ಅದರಲ್ಲಿದ್ದರೂ ಸಹ ನನಗೆ ದೂರವಾಣಿ ಮೂಲಕ ಸಂಪರ್ಕಿಸಿ ಕೆಲವು ರಾಜಕೀಯ ಮುಖಂಡರ ಒತ್ತಡದಿಂದ ರಾಜೀನಾಮೆ ನೀಡಿದ್ದೇವೆ. ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ ಎಂದು ಹೇಳಿದ್ದಾರೆ. ರಾಜೀನಾಮೆ ಕೊಟ್ಟವರೆಲ್ಲರ ಸಭೆ ಕರೆದು ಮನವೊಲಿಸುವ ಪ್ರಯತ್ನ ಮಾಡುತ್ತೇನೆ'' ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ರವಿಕುಮಾರ, ಮುತ್ತು ಲಕ್ಷ್ಮೀ, ಬಿಕಾಸ್, ಪ್ರಫುಲ್ ಬಿಸ್ವಾಸ್ ಸೇರಿದಂತೆ ಇತರರಿದ್ದರು.
ಪ್ರಕರಣದ ಹಿನ್ನೆಲೆ: ಗ್ರಾಮ ಪಂಚಾಯ್ತಿ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಗಳು ನಡೆಯುತ್ತಿದ್ದು, ಇದೀಗ ರಾಯಚೂರು ಜಿಲ್ಲೆಯ ಗ್ರಾಮ ಪಂಚಾಯತಿಯೊಂದರ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಆದ್ರೆ, ಬೇರೆಯವರು ಅಧ್ಯಕ್ಷ ಗಾದಿಗೆ ಏರಿದ್ದಾರೆ ಎಂಬ ವಿಚಾರದ ಹಿನ್ನೆಲೆ 15 ಜನ ಗ್ರಾ.ಪಂ. ಸದಸ್ಯರು ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದರು.
ಆರ್.ಹೆಚ್. ನಂ.1 ಗ್ರಾಮ ಪಂಚಾಯಿತಿಯಲ್ಲಿ ಇತ್ತೀಚೆಗೆ ಗ್ರಾಮ ಪಂಚಾಯತಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಎರಡನೇ ಅವಧಿಗೆ ಚುನಾವಣೆ ನಡೆದಿತ್ತು. ಚುನಾವಣೆ ಫಲಿತಾಂಶದಿಂದ ಸದಸ್ಯರ ಅಸಮಾಧಾನ ಭುಗಿಲೆತ್ತು. 15 ಸದಸ್ಯರು ತಮ್ಮ ಸದಸ್ವತಕ್ಕೆ ರಾಜೀನಾಮೆ ನೀಡಿದ್ದರು. ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ಸದಸ್ಯರು ಸ್ಪರ್ಧಿಸಿದ್ದರು. ಇಬ್ಬರಿಗೂ ಸಮಬಲವಾಗಿ ಮತಗಳು ಬಿದ್ದಿದ್ದವು. ನಂತರ ನಡೆದ ಟಾಸ್‌ನಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಲಕ್ಷ್ಮೀ ರಾಣಿ ಮಂಡಲ್ ಗೆದ್ದಿದ್ದರು. ಉಪಾಧ್ಯಕ್ಷೆಯೂ ಸೇರಿದಂತೆ ಸದಸ್ಯರಾದ ಬಿಪ್ರದಾಸ್ ಸರ್ದಾರ್, ಬ್ರೋಜೇನ್ ಮಂಡಲ್, ಮಿಥಾಲಿ, ಚಂದ್ರಿಮಾ ಸರ್ಕಾರ್, ರೇಣುಕಾ, ಅರ್ಜುನ್ ಗೋಲ್ದಾರ್, ಸಂದ್ಯಾ ಮಂಡಲ್, ಸಂದ್ಯಾ ಡಾಲಿ, ಮುಕ್ತಿರಾಣಿ ಬಿಸ್ವಾಸ್, ಶೃತಿ ಮಾಲಾ, ಸುಕುಮಾರ್ ಬಾಚರ, ಬಸವರಾಜ, ವಾಸುದೇವ್ ರೆಡ್ಡಿ, ಕರಿಯಪ್ಪ ಸೇರಿದಂತೆ ಇನ್ನೂ ಮೂರು ಜನ ಸದಸ್ಯರು ರಾಜೀನಾಮೆ ನೀಡಲು ಮುಂದಾಗಿದ್ದರು.
ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹೈಕಮಾಂಡ್ ನನಗೆ ಹೇಳಿಲ್ಲ: ಸಚಿವ ಸತೀಶ ಜಾರಕಿಹೊಳಿ