ರಾಯಚೂರು: ತಾಲೂಕಿನ ಯರಮರಸ್ ಥರ್ಮಲ್ ಪವರ್ ಸ್ಟೇಷನ್ (ವೈಟಿಪಿಎಸ್)ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೂರಾರು ಸಾಂಸ್ಥಿಕ ವೃಂದದ ಅಧಿಕಾರಿಗಳನ್ನು ಕೆಪಿಸಿಯ ಇತರೆ ಮೂಲಗಳಿಗೆ ಮರು ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.
ವೈಟಿಪಿಎಸ್ ಕೇಂದ್ರದ ನಿರ್ವಹಣೆ ಮತ್ತು ವಿದ್ಯುತ್ ಉತ್ಪಾದನೆಯನ್ನು ಖಾಸಗಿ ಸಂಸ್ಥೆಗೆ ವಹಿಸಿಲಾಗಿದೆ. ಇದರಿಂದಾಗಿ ವಿವಿಧ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳು, ಸಿಬ್ಬಂದಿಯನ್ನು ಕೆಪಿಸಿಯ ಜಲ ಹಾಗೂ ಶಾಖೋತ್ಪನ್ನ ಕೇಂದ್ರಗಳು ಇರುವ ಬಿಟಿಪಿಎಸ್, ಎಸ್ಜಿಎಸ್, ಕಾಳಿ ಮತ್ತು ವರಾಹಿ ಯೋಜನಾ ಪ್ರದೇಶಗಳಿಗೆ ಮರು ನಿಯುಕ್ತಿ ಮಾಡಲಾಗಿದೆ.
ಮೊದಲ ಹಂತದಲ್ಲಿ 146 ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಮರು ನಿಯುಕ್ತಿ ಮಾಡಲಾಗಿದೆ. 10 ವರ್ಷಕ್ಕಿಂತ ಕಡಿಮೆ ಅವಧಿಗೆ ಜಲ ವಿದ್ಯುತ್ ಸ್ಥಾವರಗಳಲ್ಲಿ ಸೇವೆ ಸಲ್ಲಿಸಿರುವ ಉದ್ಯೋಗಿಗಳನ್ನು ಜಲ ವಿದ್ಯುತ್ ಸ್ಥಾವರಗಳಿಗೆ, 10 ವರ್ಷಕ್ಕಿಂತ ಕಡಿಮೆ ಅವಧಿಗೆ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕೆಲಸ ಮಾಡಿದವರನ್ನು ಆರ್ಟಿಪಿಎಸ್ ಮತ್ತು ಬಿಟಿಪಿಎಸ್ಗೆ ಮರು ನಿಯುಕ್ತಿ ಮಾಡಲಾಗಿದೆ. ನಿವೃತ್ತಿಗೆ ಸಮೀಪವಿರುವ 2 ವರ್ಷ, ಅದಕ್ಕಿಂತ ಕಡಿಮೆ ಸೇವಾವಧಿ ಇರುವ ಮತ್ತು ಪತಿ-ಪತ್ನಿ ಪ್ರಕರಣಗಳ ವ್ಯಾಪ್ತಿಗೆ ಬರುವವರನ್ನು ಆರ್ಟಿಪಿಎಸ್ಗೆ ನಿಯುಕ್ತಿಗೊಳಿಸಲಾಗಿದೆ.
ವೈಟಿಪಿಎಸ್ನಿಂದ ಜಲ ವಿದ್ಯುತ್ ಯೋಜನಾ ಪ್ರದೇಶಕ್ಕೆ ಇಇ, ಎಇಇ, ಜೆಇ ಸೇರಿದಂತೆ ಒಟ್ಟು 49 ಜನರನ್ನು ಮರು ನಿಯುಕ್ತಿಗೊಳಿಸಲಾಗಿದ್ದು, ಆರ್ಟಿಪಿಎಸ್ಗೆ 67 ಅಧಿಕಾರಿಗಳನ್ನು ಮತ್ತು ಬಿಟಿಪಿಎಸ್ಗೆ 30 ಅಧಿಕಾರಿಗಳನ್ನು ಮರು ನಿಯುಕ್ತಿಗೊಳಿಸಲಾಗಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿ ತ್ವರಿತವಾಗಿ ನಿಯೋಜಿಸಿದ ಯೋಜನಾ ಪ್ರದೇಶದಲ್ಲಿ ಕರ್ತವ್ಯಕ್ಕೆ ಹಾಜರು ಆಗುವಂತೆ ಕೆಪಿಸಿ ವ್ಯವಸ್ಥಾಪಕ ನಿರ್ದೇಶಕ ಪೊನ್ನಾರಾಜ್ ಆದೇಶಿಸಿದ್ದಾರೆ.
ಸರ್ಕಾರ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ವೈಟಿಪಿಎಸ್ ನಿರ್ಮಾಣ ಮಾಡಿ ಇತ್ತೀಚೆಗೆ ಹೈದರಾಬಾದ್ ಮೂಲದ ಪವರ್ ಮೇಕ್ ಎನ್ನುವ ಖಾಸಗಿ ಕಂಪನಿಗೆ ನಿರ್ಹವಣೆ ಮತ್ತು ವಿದ್ಯುತ್ ಉತ್ಪಾದನೆ ಹೊಣೆ ನೀಡಲಾಗಿದೆ. ಇದೀಗ ಸಾಂಸ್ಥಿಕ ವೃಂದ, ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಮರು ನಿಯುಕ್ತಿ ಮಾಡುವ ಮೂಲಕ ಸಂಪೂರ್ಣವಾಗಿ ಖಾಸಗಿ ಕಂಪನಿಗೆ ನೀಡಿದಂತಾಗಿದೆ.