ರಾಯಚೂರು : ದಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಕೆಲ ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಇನ್ನುಳಿದ ಕೆಲ ವಿದ್ಯಾರ್ಥಿನಿಯರು ಕೊರೊನಾ ಭೀತಿಯಿಂದ ಮನೆಗೆ ತೆರಳುತ್ತಿದ್ದಾರೆ.
ನಗರದ ಹೊರವಲಯದಲ್ಲಿರುವ ವಸತಿ ನಿಲಯದಲ್ಲಿ ಕಳೆದ ಎರಡು ದಿನಗಳ ಹಿಂದೆ ಇಬ್ಬರು ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರಿಬ್ಬರ ಸ್ವಾಬ್ ಟೆಸ್ಟ್ ಮಾಡಲಾಗಿತ್ತು. ಈ ವೇಳೆ ಇಬ್ಬರು ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಇದಾದ ಬಳಿಕ ಪಾಸಿಟಿವ್ ಇರುವ ವಿದ್ಯಾರ್ಥಿಗಳನ್ನ ಪತ್ಯೇಕ ಕೊಠಡಿಯಲ್ಲಿ ಇರಿಸಿ, ಇನ್ನುಳಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಡಿಸಲಾಗಿದೆ. ಆಗ ಹಾಸ್ಟೆಲ್ ವಾರ್ಡನ್, ಅಡುಗೆ ಸಿಬ್ಬಂದಿ ಹಾಗೂ 11 ವಿದ್ಯಾರ್ಥಿನಿಯರಿಗೆ ಸೋಂಕು ಇರುವುದು ದೃಢಪಟ್ಟಿದೆ.
ಸೋಂಕು ಪತ್ತೆಯಾದ ವಿದ್ಯಾರ್ಥಿನಿಯರನ್ನ ವಸತಿ ನಿಲಯದ ಮೊದಲ ಮಹಡಿಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ, ಅಗತ್ಯ ವ್ಯವಸ್ಥೆ, ಚಿಕಿತ್ಸೆ ನೀಡಲಾಗುತ್ತಿದೆ. ಈ ಹಾಸ್ಟೆಲ್ನಲ್ಲಿ ಒಟ್ಟು 170 ವಿದ್ಯಾರ್ಥಿನಿಯರು ವಾಸವಿದ್ದು, ಇದೀಗ ವಾರ್ಡನ್, ಅಡುಗೆ ಸಿಬ್ಬಂದಿ ಹಾಗೂ 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರಲ್ಲಿ ಸೋಂಕು ಕಾಣಿಸಿದೆ.
ತಮಗೂ ಸೋಂಕು ಹರಡುತ್ತೆ ಎನ್ನುವ ಭೀತಿಯಲ್ಲಿ ನೂರಾರು ವಿದ್ಯಾರ್ಥಿಗಳು ಮನೆಗೆ ತೆರಳುತ್ತಿದ್ದಾರೆ. ಪರೀಕ್ಷೆ ಇರುವ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿದ್ದಾರೆ ಎಂದು ಇಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ