ಮೈಸೂರು: ಪ್ರೀತಿಸಿದ ಯುವತಿ ಮದುವೆಯಾಗಲು ನಿರಾಕರಿಸಿದಳು ಎಂಬ ಕಾರಣದಿಂದ ಮೈಸೂರಿನ ರೈಲ್ವೇ ಇಲಾಖೆಯಲ್ಲಿ ಸಹಾಯಕ ತಾಂತ್ರಿಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ದಾವಣಗೆರೆ ಮೂಲದ ಯುವಕ, ತಾನು ಬಾಡಿಗೆ ಪಡೆದಿದ್ದ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ.
ದಾವಣಗೆರೆ ಮೂಲದ ಯುವಕ ಕೇಶವ (30) ಆತ್ಮಹತ್ಯೆಗೆ ಶರಣಾದ ಯುವಕ. ಈತ ಮೈಸೂರಿನ ರೈಲ್ವೇ ಇಲಾಖೆಯಲ್ಲಿ ತಾಂತ್ರಿಕ ಸಹಾಯಕ ಇಂಜಿನಿಯರ್ ಅಗಿ ಕೆಲಸ ಮಾಡುತ್ತಿದ್ದ. ಈತ ಕಳೆದ ಎರಡೂವರೆ ವರ್ಷಗಳಿಂದ ದಾವಣಗೆರೆ ಮೂಲದ, ತಮ್ಮ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ಇವರಿಬ್ಬರ ಮದುವೆಗೆ ಯುವತಿ ಮನೆಯವರು ವಿರೋಧ ವ್ಯಕ್ತಪಡಿಸಿದರು. ಇದರಿಂದ ಪ್ರೀತಿಸಿದ ಯುವತಿ, ಮನೆಯವರ ವಿರೋಧದಿಂದ ಮದುವೆಯಾಗಲು ಒಪ್ಪಲಿಲ್ಲ.
ಆದರೂ ಯುವತಿಯನ್ನು ಮನವೊಲಿಸಲು ಕೇಶವ ಯತ್ನಿಸಿದ್ದಾನೆ. ಆದರೆ ಯುವತಿ ಒಪ್ಪಲಿಲ್ಲ. ಇದರ ನಡುವೆ ಕೇಶವನ ಮನೆಯವರು ಬೇರೆ ಹುಡುಗಿಯನ್ನು ಮದುವೆಯಾಗುವಂತೆ ಒತ್ತಡ ಹೇರಿದ್ದರು. ಆದರೆ, ಯುವಕ ಪ್ರೀತಿಯ ಗುಂಗಿನಿಂದ ಹೊರಬಾರದೆ. ತಾನು ವಾಸವಿದ್ದ ಮೈಸೂರಿನ ಟಿ ಕೆ. ಲೇಔಟ್ನ ಮನೆಯಲ್ಲಿ, ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗುರುವಾರ ಮನೆಯಿಂದ ಕೇಶವ ಹೊರಬರದಿದ್ದನ್ನು ಗಮನಿಸಿದ ಮನೆ ಮಾಲೀಕರು, ಕಿಟಕಿ ಬಾಗಿಲು ತೆರೆದು ನೋಡಿದಾಗ ಆತ ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ.
ಈ ಸಂಬಂಧ ತಕ್ಷಣ ಮನೆ ಮಾಲೀಕರು ಸರಸ್ವತಿ ಪುರಂ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಆಗಮಿಸಿ ಕುಟುಂಬಸ್ಥರಿಗೆ ಈ ವಿಚಾರ ತಿಳಿಸಿ, ಮರಣೋತ್ತರ ಪರೀಕ್ಷೆ ನಡೆಸಿ ನಂತರ ಮೃತರ ಕುಟುಂಬದವರಿಗೆ ಮೃತದೇಹವನ್ನು ಹಸ್ತಾಂತರಿಸಿದ್ದಾರೆ.
ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಮಾಡೆಲ್ ಆತ್ಮಹತ್ಯೆ: ಹಣದ ವಿಷಯಕ್ಕೆ ಗಲಾಟೆಯಾಗಿ, ಪ್ರಿಯಕರನ ವಿರುದ್ಧ ಡೆತ್ನೋಟ್ ಬರೆದಿಟ್ಟು ಮಾಡೆಲ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇತ್ತೀಚೆಗೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದದ್ದು ಮಾತ್ರವಲ್ಲದೇ ಮಾಡೆಲ್ ಕೂಡ ಆಗಿದ್ದರು. ಪ್ರಿಯಕರ ಅಕ್ಷಯ್ ಕುಮಾರ್ ಎನ್ನುವಾತ ಜಿಮ್ನಲ್ಲಿ ಟ್ರೈನರ್ ಆಗಿದ್ದನು. ವಿದ್ಯಾಶ್ರೀ ಡೈರಿಯಲ್ಲಿ ಅಕ್ಷಯ್ ಕುಮಾರ್ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ವಿದ್ಯಾಶ್ರೀ ಅವರ ತಾಯಿ ನೀಡಿದ್ದ ದೂರಿನ ಆಧಾರದಲ್ಲಿ, ಪ್ರಾಥಮಿಕ ತನಿಖೆ ವೇಳೆ ಈ ವಿಷಯ ಬಯಲಾಗಿದ್ದು, ಪೊಲೀಸರು ಪ್ರಿಯಕರ ಅಕ್ಷಯ್ ಕುಮಾರ್ ನನ್ನು ಬಂಧಿಸಿದ್ದರು.
ಇದನ್ನೂ ಓದಿ: ಬೆಂಗಳೂರು: ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಮಾಡೆಲ್!