ಮೈಸೂರು: ಸಾಮೂಹಿಕ ಹನುಮ ಜಯಂತಿಗೆ ರಾಜವಂಶಸ್ಥ ಯದುವೀರ್ ಹಾಗೂ ಚಿತ್ರ ನಟ ವಸಿಷ್ಠಸಿಂಹ ಕೋಟೆ ಆಂಜನೇಯ ದೇವಾಲಯದ ಬಳಿ ಚಾಲನೆ ನೀಡಿದರು.
ಇಂದು ಮೈಸೂರು ನಗರದ ವಿವಿಧ ಹಿಂದೂ ಪರ ಸಂಘಟನೆಗಳು ಒಟ್ಟಾಗಿ ಮೊದಲ ಬಾರಿಗೆ ಸಾಮೂಹಿಕ ಹನುಮ ಜಯಂತಿ ಆಯೋಜನೆ ಮಾಡಿದ್ದವು. ನಗರದ ಅರಮನೆ ಮುಂಭಾಗದ ಕೋಟೆ ಆಂಜನೇಯ ದೇವಾಲಯದ ಮುಂಭಾಗದಲ್ಲಿ ನಡೆದ ಹನುಮ ಜಯಂತಿಯ ಮೆರವಣಿಗೆಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಚಿತ್ರ ನಟ ವಸಿಷ್ಠಸಿಂಹ ಭಾಗವಹಿಸಿದ್ದರು. ಹನುಮ ಜಯಂತಿಯಲ್ಲಿ ಬೆಳ್ಳಿ ರಥದ ಮೇಲೆ ಹನುಮ ವಿಗ್ರಹವನ್ನು ನಗರದ ಪ್ರಮುಖ ರಸ್ತೆಗಳಲ್ಲಿ ವೀರಗಾಸೆ, ತಮಟೆ, ಕಲಾ ತಂಡಗಳು ಹಾಗೂ ಯುವ ಸಮೂಹ ಕುಣಿತದ ಮೂಲಕ ಮೆರವಣಿಗೆ ಸಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಜವಂಶಸ್ಥ ಯದುವೀರ್, ಅರಮನೆ ಮುಂಭಾಗದ ಕೋಟೆ ಆಂಜನೇಯ ದೇವಾಲಯದ ಮುಂಭಾಗದಲ್ಲಿ ಹನುಮ ಜಯಂತಿಯನ್ನು ಉದ್ಘಾಟನೆ ಮಾಡಿದ್ದು ಸಂತೋಷವಾಗಿದೆ. ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಇನ್ನೂ ಇದೇ ಸಂದರ್ಭದಲ್ಲಿ ಮಾತನಾಡಿದ ನಟ ವಸಿಷ್ಠ ಸಿಂಹ, ನಾನು ಹುಟ್ಟಿ ಬೆಳೆದ ಮೈಸೂರಿನಲ್ಲಿ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ತಿರೋದು ತುಂಬಾ ಸಂತೋಷವಾಗಿದೆ. ಕಳೆದ ಬಾರಿ ಹುಣಸೂರಿನಲ್ಲಿ ಹನುಮ ಜಯಂತಿಯಲ್ಲಿ ಭಾಗವಹಿಸಿದ್ದೆ, ಈ ಬಾರಿ ಮೈಸೂರಿನಲ್ಲಿ ಭಾಗವಹಿಸುತ್ತಿರೋದಕ್ಕೆ ಸಂತೋಷವಾಗುತ್ತಿದೆ ಎಂದರು.