ಮೈಸೂರು: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿ ಆಯ್ಕೆಯಾಗಿರುವುದಕ್ಕೆ ಕುಟುಂಬಸ್ಥರ ಹರಕೆಯೇ ಕಾರಣವಂತೆ.
ಹೌದು, ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟೂರು. 2018ರ ವಿಧಾನಸಭಾ ಚುನಾವಣೆ ಫಲಿತಾಂಶ ಬಂದಾಗ ಅತಂತ್ರ ಪರಿಸ್ಥಿತಿ ನಿರ್ಮಾಣಗೊಂಡು ಬಿಎಸ್ವೈ ಅವರು ಬಹುಮತ ಸಾಬೀತು ಪಡಿಸುತ್ತೀನಿ ಎಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ಎರಡನೇ ದಿನಕ್ಕೆ ಬಹುಮತ ಸಾಬೀತು ಪಡಿಸದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಸರ್ಕಾರ ರಚನೆ ಮಾಡಿದವು.
ಇದರಿಂದ ಬೇಸರಗೊಂಡ ಹುಟ್ಟೂರಿನ ಕುಟುಂಬಸ್ಥರು ಬಿಎಸ್ವೈ ಮನೆ ದೇವರಾದ ಅಕ್ಕಯ್ಯಮ್ಮನಿಗೆ ಹರಕೆ ಹೊತ್ತರಂತೆ. ಮತ್ತೆ ಬಿಎಸ್ವೈ ಅವರು ಸಿಎಂ ಆದರೆ ನಿನ್ನ ಮಡಿಲಕ್ಕಿ ತುಂಬುತ್ತೀವಿ. ಸೀರೆ ಕೊಡಿಸುತ್ತೀವಿ. ಬಾಗಿನ ಅರ್ಪಿಸುತ್ತೀವಿ.. ಹೀಗೆ ಹರಕೆ ಹೊತ್ತುಕೊಂಡಿದ್ದರಂತೆ. ಈಗ ಅವರ ಹರಕೆ ಈಡೇರಿದ ಹಿನ್ನೆಲೆಯಲ್ಲಿ ಕುಟುಂಬಸ್ಥರು ದೀಪಾವಳಿಯಲ್ಲಿ ಹರಕೆ ತೀರಿಸಲಿದ್ದಾರೆ. ಅಕ್ಕಯ್ಯಮ್ಮ ಹಾಗೂ ಗ್ರಾಮದ ದೇವತೆಯಾದ ಗೋಗಲ್ಲಮ್ಮನಿಗೆ ವಿಜೃಂಭಣೆಯಿಂದ ಪೂಜೆ ನೆರವೇರಲಿದೆ.
ಈಟಿವಿ ಭಾರತ್ನೊಂದಿಗೆ ಮಾತನಾಡಿದ ಬಿಎಸ್ವೈ ಅಣ್ಣನ ಮಗ ವಿಜಯಕುಮಾರ್, ನಾಲ್ಕನೇ ಬಾರಿ ಸಿಎಂ ಆದ ನಂತರ ಗ್ರಾಮಕ್ಕೆ ಬಂದು ಬಿಎಸ್ವೈ ಅವರು ಪೂಜೆ ಸಲ್ಲಿಸಿದ್ದಾರೆ. ನಾವು ಅಕ್ಕಯ್ಯಮ್ಮನಿಗೆ ಹೊತ್ತಿರುವ ಹರಕೆ ತೀರಿಸುತ್ತೇವೆ ಎಂದಿದ್ದಾರೆ.