ಮೈಸೂರು: ಶಾಸಕರನ್ನು ಖರೀದಿ ಮಾಡದೇ ಇರಲು ಮೊದಲೇ ನಿರ್ಧರಿಸಿದ್ದೆವು ಎಂದು ಹೇಳಿಕೆ ನೀಡಿರುವ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಪ್ರಕಾರ ಶಾಸಕರು ಎಂದರೆ ಖರೀದಿ ವಸ್ತುಗಳೇ? ದೇಶವನ್ನು ಮುನ್ನಡೆಸುತ್ತಿರುವ ಪಕ್ಷದವರು ಇಂತಹ ಕೆಲಸ ಮಾಡುತ್ತಿದ್ದಾರೆ. ಇಂತವರ ಕೈಯಲ್ಲಿ ದೇಶವನ್ನು ಕೊಟ್ಟರೆ ಅದನ್ನು ದೇವರೂ ಕೂಡ ಕಾಪಾಡಲಾಗಲ್ಲ ಎಂದು ಸಾಹಿತಿ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ ದೇವನೂರು ಮಹಾದೇವ ಕಿಡಿಕಾರಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಬಾರಿ ಉಪ ಚುನಾವಣೆಯಲ್ಲಿ ಅನರ್ಹರನ್ನು ಸೋಲಿಸುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಬೇಕಿದೆ. ಅನರ್ಹರು ತಮ್ಮ ಸ್ಥಾನವನ್ನಲ್ಲದೆ ಮತದಾರರನ್ನೂ ಮಾರಿದ್ದಾರೆ. ಆದ್ದರಿಂದ ಅನರ್ಹ ಶಾಸಕರಿಗೆ ಠೇವಣಿಯೂ ಸಿಗದಂತೆ ಮಾಡುವ ಮೂಲಕ ಮತದಾರರ ಮಾನ ಉಳಿಸಿ, ಹೊಸ ರಾಜಕಾರಣಕ್ಕೆ ಮುನ್ನುಡಿ ಬರೆಯಬೇಕು ಎಂದು ಕರೆ ನೀಡಿದರು.
ರಾಜ್ಯ ಮುಳುಗಡೆಯಾದರೂ ಅನರ್ಹರು ತಮಗೇನೂ ಸಂಬಂಧವೇ ಇಲ್ಲ ಎಂಬಂತಿದ್ದರು. ಆದ್ದರಿಂದ ಅವರು ಕೊಡುವ ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದಿರಿ ಎಂದರು.