ಮೈಸೂರು: ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಜಿ ಟಿ ದೇವೇಗೌಡರ ಸಮ್ಮುಖದಲ್ಲಿಯೇ ದಡದಳ್ಳಿ ಗ್ರಾಮದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಕ್ಸಮರ ನಡೆದಿದೆ.
ಶಾಸಕ ಜಿ.ಟಿ. ದೇವೇಗೌಡ ಅವರು ತಮ್ಮ ಶಾಸಕರ ಅನುದಾನದಡಿಯಲ್ಲಿ ಗ್ರಾಮದ ರಸ್ತೆ ಅಭಿವೃದ್ಧಿಗೆ 50 ಲಕ್ಷ ರೂ ನೀಡಿದ್ದು, ಅದನ್ನು ಪರಿಶೀಲಿಸಿ ಪೂಜೆ ಸಲ್ಲಿಸಲು ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಒಂದು ಗುಂಪು ಗ್ರಾಮದ ಹೊರಗಿನ ಸ್ಮಶಾನ, ಶಾಲೆಯ ರಸ್ತೆ ಮೊದಲು ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿದ್ದಲ್ಲದೇ ಅಲ್ಲೇ ಕಾಮಗಾರಿಗೆ ಪೂಜೆ ನಡೆಸುವಂತೆ ಹೇಳಿದ್ದಾರೆ.
ಆದರೆ, ಇನ್ನೊಂದು ಗುಂಪು ಗ್ರಾಮದ ಒಳಗಿನ ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ ಪಟ್ಟು ಹಿಡಿದಿದೆ. ಜೊತೆಗೆ ಗ್ರಾಮದ ಹೊರಗಿನ ಅಭಿವೃದ್ಧಿಗೆ ಇನ್ನೂ 40 ಲಕ್ಷ ರೂ. ಬಿಡುಗಡೆಗೆ ಶಾಸಕರು ಸಿದ್ಧರಿದ್ದಾರೆ. ಹೀಗಾಗಿ ಗ್ರಾಮದ ಒಳಗೆ ಪೂಜೆ ನಡೆಸಲಿ ಎಂದು ಹೇಳಿದೆ. ಇದರಿಂದಾಗಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಜೆಡಿಎಸ್ ಬೆಂಬಲಿತ ಗ್ರಾಪಂ ಸದಸ್ಯರ ನಡುವೆ ತಿಕ್ಕಾಟ ನಡೆದಿದೆ.
ಈ ಸಂದರ್ಭ ಗ್ರಾಮದ ಅಭಿವೃದ್ಧಿಗೆ ಸರ್ಕಾರದಿಂದ ಎಷ್ಟಾದರೂ ಅನುದಾನ ನೀಡಲು ಸಿದ್ಧನಿದ್ದೇನೆ. ಆದರೆ ಗ್ರಾಮಸ್ಥರು ಒಗ್ಗೂಡಿ ಬರುವಂತೆ ಹೇಳಿ ಶಾಸಕ ಜಿ.ಟಿ.ದೇವೇಗೌಡ ಸ್ಥಳದಿಂದ ತೆರಳಿದ್ದಾರೆ.
ಕಾಂಗ್ರೆಸ್ ಟೀಕೆ : ಈ ನಡುವೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಜಿ.ಟಿ. ದೇವೇಗೌಡರಿಂದ ಗ್ರಾಮದಲ್ಲಿ ಇದುವರೆಗೂ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಹೇಳಿದ್ದು, ಇದಕ್ಕೆ ಪ್ರತಿಯಾಗಿ ಜೆಡಿಎಸ್ ಸದಸ್ಯರು ಗ್ರಾಮದಲ್ಲಿ ರಾಮಮಂದಿರ ಕಟ್ಟಲು ಕೊಟ್ಟ ಹಣವನ್ನು ಕಾಂಗ್ರೆಸ್ ಬಳಸಿಕೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೆ ಶಾಸಕರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ವಿಧಾನಸಭೆ ಚುನಾವಣೆಗೂ ಮುನ್ನವೇ ಗ್ರಾಮದಲ್ಲಿ ಕೈ, ಜೆಡಿಎಸ್ ನಡುವೆ ತಿಕ್ಕಾಟ ಶುರುವಾಗಿದೆ.
ಇದನ್ನೂ ಓದಿ : ಎಂ ಬಿ ಪಾಟೀಲ್ ವಿರುದ್ಧ ಸಿ ಟಿ ರವಿ ತಿರುಗೇಟು.. ಸವಾಲು ಸ್ವೀಕರಿಸಲು ಸಿದ್ಧವೆಂದು ಟಾಂಗ್